ADVERTISEMENT

ಮೌಢ್ಯ ಬಿಟ್ಟು ಅಧ್ಯಾತ್ಮದೆಡೆಗೆ ಬನ್ನಿ: ನಿರ್ಮಲಾನಂದ ಸ್ವಾಮೀಜಿ

ಕುಂಭಾಭಿಷೇಕ ಮಹೋತ್ಸವದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:39 IST
Last Updated 16 ಏಪ್ರಿಲ್ 2025, 15:39 IST
<div class="paragraphs"><p>ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಭಯಾಂಜನೇಯಸ್ವಾಮಿ, ಪ್ರಸನ್ನ ಮಹಾಗಣಪತಿ ಮತ್ತು ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮತ್ತು ಲೋಕಾರ್ಪಣೆ ಪ್ರಯುಕ್ತ ಬುಧವಾರ ಆದಿಚುಂಚುನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಯಾಂಜನೇಯಸ್ವಾಮಿಗೆ ಆರತಿ ಬೆಳಗಿದರು. </p></div>

ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಭಯಾಂಜನೇಯಸ್ವಾಮಿ, ಪ್ರಸನ್ನ ಮಹಾಗಣಪತಿ ಮತ್ತು ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮತ್ತು ಲೋಕಾರ್ಪಣೆ ಪ್ರಯುಕ್ತ ಬುಧವಾರ ಆದಿಚುಂಚುನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಯಾಂಜನೇಯಸ್ವಾಮಿಗೆ ಆರತಿ ಬೆಳಗಿದರು.

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಹಿಂದೆ ಮೌಢ್ಯ ಹೆಚ್ಚಿದ್ದವು. ಅವು ಬಹುತೇಕ ಅಳಿದು ಹೋಗಿವೆ. ಈಗ ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಹೋದವರೇ ಮೂಢನಂಬಿಕೆಯ ಭಾಗವಾಗುತ್ತಿರುವುದು ಹೆಚ್ಚಾಗುತ್ತಿದೆ. ಆದರೆ, ಆತ್ಯಂತಿಕ ಆನಂದವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೌಢ್ಯ ಬಿಟ್ಟು ಅಧ್ಯಾತ್ಮದೆಡೆಗೆ ಸಾಗಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.

ADVERTISEMENT

ಮಹಾಲಕ್ಷ್ಮಿ ಬಡಾವಣೆಯ ಬಿಜಿಎಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ನಡೆದ ಅಭಯಾಂಜನೇಯ ಸ್ವಾಮಿ, ಪ್ರಸನ್ನ ಗಣಪತಿ ಮತ್ತು ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣೆ ಬಳಿಕ ನಡೆದ ಸ್ವಸ್ಥಿ ವಿದ್ಯಾರ್ಥಿನಿ ನಿಲಯ ಉದ್ಘಾಟನೆ, ಭಕ್ತ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ವಿಜ್ಞಾನ, ತಂತ್ರಜ್ಞಾನದ ಕಾಲದಲ್ಲಿ ಅಧ್ಯಾತ್ಮ ಸದಾಕಾಲ ಇರಬೇಕು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರದ್ಧೆಯನ್ನು ಮೂಡಿಸಬೇಕು ಎಂಬ ಕಾರಣದಿಂದ ಆಂಜನೇಯ ಸ್ವಾಮಿಯ ದೇವಾಲಯ ನಿರ್ಮಾಣ ಮಾಡಲಾಗಿದೆ. ಆಂಜನೇಯ ಅಂದರೆ ಬುದ್ಧಿ, ಯಶಸ್ಸು, ಶಕ್ತಿ. ಆಂಜನೇಯನನ್ನು ಸ್ಮರಿಸಿದರೆ ನಮ್ಮ ಬದುಕು ಬೆಳಗುತ್ತದೆ’ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಕಲ್ಲುಬೆಟ್ಟಗಳ ಗುಡ್ಡದಲ್ಲಿ ವಿದ್ಯಾಸಂಸ್ಥೆಯನ್ನು ನಿರ್ಮಿಸಿ ವಿದ್ಯಾದಾನ ಮಾಡುತ್ತಿರುವ ಇದೇ ಪ್ರದೇಶದಲ್ಲಿ ಆಂಜನೇಯ ದೇವರನ್ನು ಪ್ರತಿಷ್ಠಾಪಿಸಿ ಭಕ್ತಿ ಮತ್ತು ಶಕ್ತಿಯನ್ನು ಆದಿಚುಂಚನಗಿರಿ ಸ್ವಾಮೀಜಿ ನೀಡಿದ್ದಾರೆ. ಆಸ್ಪತ್ರೆಯನ್ನು ನಿರ್ಮಿಸುವ ಸಂಕಲ್ಪ ಅವರದ್ದಾಗಿದೆ’ ಎಂದು ತಿಳಿಸಿದರು.

ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಡಾ.ಕೆ. ಸುಧಾಕರ್‌, ಶಾಸಕರಾದ ಕೆ. ಗೋಪಾಲಯ್ಯ, ಡಾ.ಸಿ.ಎನ್‌. ಅಶ್ವಥ್‌ ನಾರಾಯಣ, ಎಸ್‌.ಆರ್. ವಿಶ್ವನಾಥ್, ವಿವಿಧ ಸ್ವಾಮೀಜಿಗಳು ಭಾಗವಹಿಸಿದ್ದರು.

‘ಗೋರಕ್ಷ ಬೋಧೆ’, ‘ಸಿದ್ಧ ಸಿದ್ಧಾಂತ ಪದ್ಧತಿ’ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ದೇವಾಲಯದಲ್ಲಿ ಕುಂಭಾಭಿಷೇಕ, ಮಹಾಮಂಗಳಾರತಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ದೇವಾಲಯದ ಕುಂಭಾಭಿಷೇಕ ಮತ್ತು ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ನಡೆದ ಭಕ್ತಸಮಾಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.