ADVERTISEMENT

ಪರ್ಯಾಯ ಆಡಳಿತ ಬೇಡ: ವಿವಿಧ ಸಂಘಟನೆಗಳ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ದ್ವೇಷದ ಅಪರಾಧಗಳ ಕುರಿತು ವರದಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 4:52 IST
Last Updated 20 ನವೆಂಬರ್ 2021, 4:52 IST
ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆಯ (ಎಐಎಸ್ಎ) ಆರಾತ್ರಿಕ, ಮಾರ್ಟಿನ್ ಕೃಷ್ಣ, ಯುವಶಕ್ತಿ ಸಂಘಟನೆಯ ಎಂ. ಯಾಸಿನ್, ಮಾನವ ಹಕ್ಕುಗಳ ಕಾರ್ಯಕರ್ತ ಸುನಿಲ್ ಮೋಹನ್, ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಇದ್ದರು - - -– ಪ್ರಜಾವಾಣಿ ಚಿತ್ರ
ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆಯ (ಎಐಎಸ್ಎ) ಆರಾತ್ರಿಕ, ಮಾರ್ಟಿನ್ ಕೃಷ್ಣ, ಯುವಶಕ್ತಿ ಸಂಘಟನೆಯ ಎಂ. ಯಾಸಿನ್, ಮಾನವ ಹಕ್ಕುಗಳ ಕಾರ್ಯಕರ್ತ ಸುನಿಲ್ ಮೋಹನ್, ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಇದ್ದರು - - -– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ಯಾವುದೇ ರೀತಿಯ ಸಮಾನಾಂತರ ಆಡಳಿತ ನಡೆಯಲು ಅವಕಾಶ ಕಲ್ಪಿಸಬಾರದು ಮತ್ತು ಕೋಮು ಹಿಂಸಾಚಾರಗಳಲ್ಲಿ ತೊಡಗಿರುವ ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಸೆಪ್ಟೆಂಬರ್‌ವರೆಗೆ ನಡೆದ ಕೋಮು ದ್ವೇಷದ ಅಪರಾಧಗಳ ಕುರಿತು ವರದಿ ಪ್ರಕಟಿಸಿರುವ ಈ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಈ ಒತ್ತಾಯ ಮಾಡಿವೆ.

‘ಮತೀಯ ಗೂಂಡಾಗಿರಿಯಿಂದ ದ್ವೇಷ ಅಪರಾಧಗಳವರೆಗೆ: ಅಂಬೇಡ್ಕರ್‌ ಅವರ ಭ್ರಾತೃತ್ವದ ಕನಸಿನ ಮೇಲೆ ದಾಳಿ’ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಲಾದ ಈ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

ADVERTISEMENT

ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌(ಪಿಯುಸಿಎಲ್‌), ಆಲ್‌ ಇಂಡಿಯಾ ಲಾಯರ್ಸ್‌ ಅಸೋಸಿಯೇಷನ್‌ ಫಾರ್‌ ಜಸ್ಟಿಸ್‌ (ಎಐಎಲ್‌ಎಜೆ), ಎಲ್‌ ಇಂಡಿಯಾ ಪೀಪಲ್ಸ್‌ ಫೋರಂ (ಎಐಪಿಎಫ್) ಮತ್ತು ಗೌರಿಲಂಕೇಶ್‌ ನ್ಯೂಸ್‌ ಡಾಟ್‌ ಕಾಮ್‌ ಈ ವರದಿ ಪ್ರಕಟಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳ ಬಗ್ಗೆ ವರದಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿಯನ್ನು ಬಹಿರಂಗವಾಗಿ ಸಮರ್ಥಿಸಿ ಹೇಳಿಕೆ ನೀಡಿದ್ದನ್ನು ಸಹ ಉಲ್ಲೇಖಿಸಲಾಗಿದೆ.

‘ಅಂತರ್ಜಾತಿ ಅಥವಾ ಅಂತರಧರ್ಮಿಯರ ದಂಪತಿಗಳಿಗೆ ಯಾರಿಂದಲೂ ಕಿರುಕುಳ, ಬೆದರಿಕೆಗಳು ಅಥವಾ ಹಿಂಸಾಚಾರದ ಕೃತ್ಯಗಳಿಗೆ ಒಳಗಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಯಾವುದೇ ದುಷ್ಕೃತ್ಯಗಳನ್ನು ಕೈಗೊಳ್ಳುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಮತೀಯ ಗೂಂಡಾಗಿರಿಯ ಎಲ್ಲ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ಒತ್ತಾಯಿಸಲಾಗಿದೆ.

ಜಿಲ್ಲೆಯಲ್ಲಿ ಗುರುತಿಸಲಾದ ವಿವಿಧ ಘಟನೆಗಳು
* ಸಾಮಾಜಿಕ ಪ್ರತ್ಯೇಕತೆಯನ್ನು ಜಾರಿಗೊಳಿಸುವುದು
* ಆತ್ಮೀಯ ಸಂಬಂಧಗಳನ್ನು ನಿಯಂತ್ರಿಸುವುದು
* ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರ
* ಗೋವಿನ ಹೆಸರಿನಲ್ಲಿ ದಾಳಿಗಳು
* ಧಾರ್ಮಿಕ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು
* ದ್ವೇಷ ಬಿತ್ತುವ ಭಾಷಣಗಳನ್ನು ಹರಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.