
ಬೆಂಗಳೂರು: ‘ಸಮುದಾಯದ ಆರೋಗ್ಯ ವೃದ್ಧಿಯಲ್ಲಿ ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಅವರ ಸೇವೆ ಅತ್ಯಗತ್ಯ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಟಿ.ನವೀನ್ ಅಭಿಪ್ರಾಯಪಟ್ಟರು.
ಸಂಸ್ಥೆಯ ನರ್ಸಿಂಗ್ ಕಾಲೇಜು ವತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸಮುದಾಯ ಆರೋಗ್ಯ ಕಾರ್ಯಾಗಾರ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿ, ಮಾತನಾಡಿದರು.
‘ಸಮುದಾಯ ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ರೋಗಿಗಳ ಜತೆಗೆ ನಿರಂತರ ಒಡನಾಟದಲ್ಲಿ ಇರುವ ಅವರು, ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಾರೆ. ವೈದ್ಯರ ಜತೆಗೆ ಶುಶ್ರೂಷಕರೂ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಸರ್ಕಾರದ ಆಶಯವನ್ನು ಸಾಕಾರಗೊಳಿಸಬೇಕು’ ಎಂದು ಹೇಳಿದರು.
‘ವೈದ್ಯಕೀಯ ಕ್ಷೇತ್ರದ ಬದಲಾವಣೆಗೆ ಸಂಬಂಧಿಸಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕಾಲ ಕಾಲಕ್ಕೆ ತರಬೇತಿ ನೀಡಲಾಗುತ್ತಿದೆ’ ಎಂದರು.
ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಕೆ.ಮಲ್ಲು, ‘ನಮ್ಮ ದೇಶವು ಹಳ್ಳಿಗಳಿಂದ ಕೂಡಿದ್ದು, ಹಳ್ಳಿ ಜನರ ಆರೋಗ್ಯ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಸಮುದಾಯ ಆರೋಗ್ಯವು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತದೆ. ಪ್ರಾಥಮಿಕ ಹಂತದಲ್ಲಿ ರೋಗಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಲು ಸಮುದಾಯ ಅರೋಗ್ಯ ಕೇಂದ್ರಗಳು ಸಹಕಾರಿ’ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳು ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ಭಿತ್ತಿಚಿತ್ರ ಪ್ರದರ್ಶಿಸಿದರು. ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಸಮುದಾಯ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.