
ಬೆಂಗಳೂರು: ‘ಕೆಲವೇ ಕೆಲವು ಜನರಿಂದ ಮಠ ನಡೆಯುವಂತೆ ಆಗಬಾರದು. ಸಮುದಾಯ ಮಠವನ್ನು ನಡೆಸಬೇಕೆಂಬ ಅಭಿಲಾಷೆಯಿಂದ ಮಠದ ವಿವಿಧ ಜವಾಬ್ದಾರಿಗಳನ್ನು ಹಂಚಲಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಮಠವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಶಾಸನತಂತ್ರ ಅಧಿವೇಶನ’ದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಹಿಂದೆ ಮಠದ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ನೀಡಲಾಗುತ್ತಿತ್ತು. ಈಗ ಅದಕ್ಕೆ ವ್ಯವಸ್ಥೆಯ ರೂಪ ನೀಡಿ, ಸಮಷ್ಟಿಗೆ ಅಥವಾ ಸಮಿತಿಗೆ ಜವಾಬ್ದಾರಿಯನ್ನು ಹಂಚಲಾಗಿದೆ. ಮಠದಲ್ಲಿ ಪದಾಧಿಕಾರಿಗಳು ಎಂಬ ಜವಾಬ್ದಾರಿ ನೀಡಿದರೂ, ಅದು ಅಧಿಕಾರದ ಗದ್ದುಗೆಯಲ್ಲ. ಅಲ್ಲಿ ಕರ್ತವ್ಯದ ಹೊಣೆಗಾರಿಕೆ ಮಾತ್ರವಿದ್ದು, ಇದನ್ನು ಕಾರ್ಯಕರ್ತರು ಮನಗಾಣಬೇಕು’ ಎಂದರು.
ವಿದ್ವಾಂಸ ಎಂ.ಎಸ್. ಸನತ್ ಕುಮಾರ್ ಸೋಮಯಾಜಿ, ‘ಕಾರ್ಯಕರ್ತರಾಗಿ ಸೇವೆ ಮಾಡುವಾಗ ನಾನೇನು ಮಾಡಿದೆ ಎಂಬುದಷ್ಟೇ ಮುಖ್ಯವಾಗಬೇಕು ಹೊರತು, ನನಗೇನು ಸಿಕ್ಕಿತು ಎಂಬ ಪ್ರಶ್ನೆ ಬರಬಾರದು. ನನಗಿಂತ ಕಿರಿಯರಿಲ್ಲ ಎಂಬ ಭಾವ ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಇದ್ದಾಗ ಬಲಿಷ್ಠ ಸಂಘಟನೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ವಿದ್ವಾಂಸ ಘನಪಾಠಿ ಶಂಕರನಾರಾಯಣ ಭಟ್ಟ ಪಳ್ಳತ್ತಡ್ಕ, ‘ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ಜ್ಞಾನ ಎಂಬುದು ಮನುಷ್ಯರಿಗಿರುವ ಹೆಚ್ಚುಗಾರಿಕೆಯಾಗಿದೆ. ಸನಾತನ ಧರ್ಮದಲ್ಲಿ ಅನೇಕ ನಿತ್ಯ ನೈಮಿತ್ತಿಕ ಕರ್ಮಗಳನ್ನು ಹೇಳಲಾಗಿದೆ. ಅವುಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ವಿದ್ವಾಂಸ ಜಗದೀಶ ಶರ್ಮಾ ಸಂಪ, ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ವಕೀಲ ಅರುಣ ಶ್ಯಾಮ್ ಪಾಲ್ಗೊಂಡಿದ್ದರು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸಮಾರೋಪದ ನುಡಿಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.