ADVERTISEMENT

‘ತನಿಖೆ ಬಿಟ್ರು, ಮದುವೆ ಮಾಡ್ಸೋಕೆ ಹೊರಟ್ರು’

ವಿಚಾರಣೆ ನೆಪದಲ್ಲಿ ಕಿರುಕುಳ; ಪೊಲೀಸರ ವಿರುದ್ಧ ಯುವತಿ ದೂರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 19:21 IST
Last Updated 17 ಮಾರ್ಚ್ 2019, 19:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ನನ್ನ ಹಾಗೂ ತಂದೆಯ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿಕೊಂಡು, ವಿಚಾರಣೆ ನೆಪದಲ್ಲಿ ವಾರದಿಂದ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಖಾಸಗಿ ಕಂಪನಿ ಉದ್ಯೋಗಿ ರಮ್ಯಾ ನಾಯರ್ ಎಂಬುವರು ನಗರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದಾರೆ.

‘ಮದುವೆ ಆಗುವುದಾಗಿ ನಂಬಿಸಿ ನಾನು ₹ 18 ಲಕ್ಷ ಪಡೆದು ಮೋಸ ಮಾಡಿರುವುದಾಗಿ ಅಮೆರಿಕದ ಸಾಫ್ಟ್‌
ವೇರ್ ಎಂಜಿನಿಯರ್ ಜ್ಯೋತಿಕೃಷ್ಣನ್ ಎಂಬಾತ ಸುಳ್ಳು ದೂರು ಕೊಟ್ಟಿದ್ದಾನೆ. ಪೊಲೀಸರು ಮಾರ್ಚ್ 8ರಿಂದ ನನಗೆ ನಿರಂತರವಾಗಿ ಕರೆ ಮಾಡಿ, ಆತನನ್ನೇ ಮದುವೆ ಆಗುವಂತೆ ಪೀಡಿಸುತ್ತಿದ್ದಾರೆ. ತನಿಖೆ ನಡೆಸಿ ವಾಸ್ತವ ತಿಳಿಯುವುದನ್ನು ಬಿಟ್ಟು ಈ ರೀತಿ ಬ್ಲ್ಯಾಕ್‌ಮೇಲ್ ಮಾಡುತ್ತಿ
ದ್ದಾರೆ’ ಎಂದು ರಮ್ಯಾ ಆರೋಪಿಸಿದ್ದಾರೆ.

‘2012ರಲ್ಲಿ ಜಾಲತಾಣದ ಮೂಲಕ ಜ್ಯೋತಿಕೃಷ್ಣನ್‌ನ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ ನಾನು ಐಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಆತ ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ. ಅದಕ್ಕೆ ನಮ್ಮ ಕುಟುಂಬದವರು ಒಪ್ಪಿರಲಿಲ್ಲ. ಆನಂತರ ಇಬ್ಬರೂ ಸ್ನೇಹಿತರಾಗಿ ಮುಂದುವರಿದಿದ್ದೆವು. ಐಎಎಸ್ ಮಾಡಲು ಹಣದ ಅವಶ್ಯಕತೆ ಇದ್ದಾಗ, ಸಾಲದ ರೂಪದಲ್ಲಿ ಆತನಿಂದ ಹಣ ಪಡೆದಿದ್ದೆವು. ಎರಡು ವರ್ಷದ ಬಳಿಕ ಪೂರ್ತಿ ಸಾಲ ಮರಳಿಸಿದ್ದೇವೆ. ಅದಕ್ಕೆ ದಾಖಲೆಗಳೂ ನಮ್ಮ ಬಳಿ ಇವೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಇತ್ತೀಚೆಗೆ ಜ್ಯೋತಿಕೃಷ್ಣನ್ ಮದುವೆ ವಿಚಾರವಾಗಿ ಪುನಃ ಪೀಡಿಸಲು ಪ್ರಾರಂಭಿಸಿದ್ದ. ಒಪ್ಪದಿದ್ದಕ್ಕೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ನಾನು ಸಂಪೂರ್ಣ ನಿರ್ಲಕ್ಷಿಸಿದ ಬಳಿಕ ಠಾಣೆಗೆ ಸುಳ್ಳು ದೂರು ಕೊಟ್ಟಿದ್ದಾನೆ. ‘ಠಾಣೆಗೆ ಬರದಿದ್ದರೆ ಮನೆ ಅಥವಾ ನಿಮ್ಮ ಕಂಪನಿ ಹತ್ತಿರವೇ ಜೀಪ್ ತಂದು ಬಂಧಿಸಿ ಕರೆದೊಯ್ಯುತ್ತೇವೆ. ಮಾನ ಮರ್ಯಾದೆ ತೆಗೆಯುತ್ತೇವೆ’ ಎಂದು ಪೊಲೀಸರು ಬೆದರಿಸುತ್ತಿದ್ದಾರೆ. ಆರೇಳು ದಿನ ಕಿರುಕುಳ ನೀಡಿ ಮಾರ್ಚ್ 14ರಂದು ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕೃತ್ಯ ನಡೆದಿದ್ದು ಜೆ.ಪಿ.ನಗರದಲ್ಲಿ ಎಂದು ಪೊಲೀಸರು ಎಫ್‌ಐಆರ್‌ನಲ್ಲೇ ಬರೆದುಕೊಂಡಿದ್ದಾರೆ. ಆ ಠಾಣೆಯನ್ನು ಬಿಟ್ಟು ಜ್ಯೋತಿಕೃಷ್ಣನ್ ಪರಪ್ಪನ ಅಗ್ರಹಾರಕ್ಕೇ ಹೋಗಿ ದೂರು ಕೊಟ್ಟಿದ್ದೇಕೆ? ಪೊಲೀಸರೇಕೆ ವಂಚಕನ ಪರ ನಿಂತಿದ್ದಾರೆ? ಆತನ ಬಗ್ಗೆ ನಾವು ತಿಂಗಳ ಹಿಂದೆಯೇ ಪುಟ್ಟೇನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರೂ, ಅದರ ಬಗ್ಗೆ ಯಾಕೆ ತನಿಖೆ ನಡೆಯಲಿಲ್ಲ’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.