ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಉದ್ದಿಮೆ ಪರವಾನಗಿಯನ್ನು ಒಂದು ವರ್ಷದಿಂದ ಐದು ವರ್ಷದವರೆಗೆ ನವೀಕರಣ ಮಾಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಫೆಬ್ರುವರಿ 1ರಿಂದ 28ರವರೆಗೆ ದಂಡವಿಲ್ಲದೆ ಉದ್ದಿಮೆ ಪರವಾನಗಿ ಶುಲ್ಕವನ್ನು ಆನ್‌ಲೈನ್ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ದಂಡವಿಲ್ಲದೆ ಪಾವತಿಸಿಕೊಳ್ಳಬೇಕು. ಮಾರ್ಚ್ 1ರಿಂದ 31ರವರೆಗೆ ನವೀಕರಣ ಶುಲ್ಕದ ಶೇ 25ರಷ್ಟು ದಂಡ , ಏಪ್ರಿಲ್ 1ರಿಂದ ಶೇ 100ರಷ್ಟು ದಂಡ ವಿಧಿಸಬೇಕು’ ಎಂದು ತಿಳಿಸಿದ್ದಾರೆ.
ವಸತಿ ಪ್ರದೇಶದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಗಿಯನ್ನು ತಡೆಹಿಡಿಯಬೇಕು. 40 ಅಡಿಗಳಿಗಿಂತ ಹೆಚ್ಚು ಅಗಲದ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆಗಳಿಗೆ ಮಾತ್ರ ಪರವಾನಗಿ ನವೀಕರಣ ಮಾಡಬೇಕು ಎಂದು ಸೂಚಿಸಿದ್ದಾರೆ.
‘ನಕ್ಷೆ ಉಲ್ಲಂಘನೆಯಾಗಿರುವ ಕಟ್ಟಡಗಳಲ್ಲಿ ಪೂರ್ತಿ ಅಥವಾ ಭಾಗಶಃವಾಗಿ ಉದ್ದಿಮೆಗಳಿದ್ದರೆ, ವಾಹನ ನಿಲುಗಡೆ ಪ್ರದೇಶದಲ್ಲಿ, ಚಾವಣಿ ಪ್ರದೇಶವನ್ನೂ ಬಳಸುತ್ತಿದ್ದರೆ, ಪರವಾನಗಿ ನವೀಕರಣ ಮಾಡುವಂತಿಲ್ಲ’ ಎಂದಿದ್ದಾರೆ.
ಉದ್ದಿಮೆಗಳು, ಕಲ್ಯಾಣ ಮಂಟಪಗಳು ಹೋಟೆಲ್, ರೆಸ್ಟೋರೆಂಟ್ ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ ಪಾಲನೆ ಸೇರಿದಂತೆ ಘನತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪಾಲಿಸುತ್ತಿರುವ ದಾಖಲೆಗಳನ್ನು ಪರಿಶೀಲಿಸಬೇಕು. ವಲಯ ಆರೋಗ್ಯಾಧಿಕಾರಿ, ಉಪ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಎಲ್ಲ ಅಂಶಗಳನ್ನು ಪರಿಗಣಿಸಿ, 2025-26ನೇ ಸಾಲಿನ ಪರವಾನಗಿ ನವೀಕರಣ ನೀಡಬೇಕು ಎಂದು ಸೂಚಿಸಿದ್ದಾರೆ.
ಎಫ್‌ಐಆರ್: ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಅನಧಿಕೃತ ಜಾಹೀರಾತು ಅಳವಡಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಯ ಮೂಲಕ 27,655 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಗುರುತಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ, ಮಾರಾಟ ಮಾಡಲು ಅವರಿಗೆ ಸ್ಥಳ ನಿಗದಿಪಡಿಸಬೇಕು’ ಎಂದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ, ರಮೇಶ್, ಕರೀಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.