ADVERTISEMENT

ಮುಖ್ಯಮಂತ್ರಿ ಬದಲಾವಣೆ | ಹೈಕಮಾಂಡ್‌ ತೀರ್ಮಾನವೇ ಅಂತಿಮ: ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 21:35 IST
Last Updated 28 ಅಕ್ಟೋಬರ್ 2025, 21:35 IST
ಕೆ.ಆರ್.ಪುರದಲ್ಲಿ ಜಿಬಿಎ ಪಾಲಿಕೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬೈರತಿ ಸುರೇಶ್, ಡಿ‌.ಕೆ.ಮೋಹನ್ ಇದ್ದರು.
ಕೆ.ಆರ್.ಪುರದಲ್ಲಿ ಜಿಬಿಎ ಪಾಲಿಕೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬೈರತಿ ಸುರೇಶ್, ಡಿ‌.ಕೆ.ಮೋಹನ್ ಇದ್ದರು.   

ಕೆ.ಆರ್.ಪುರ: ‘ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳಲಿದೆ. ಆದರೆ, 2028ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವುದು ಖಚಿತ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಕೆ.ಆರ್.ಪುರದಲ್ಲಿ ಹಮ್ಮಿಕೊಂಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಚುನಾವಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಒಂದು ವಾರದಿಂದಲೂ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಆನೇಕ ಚರ್ಚೆಗಳು ನಡೆಯುತ್ತಿವೆ. ವಿರೋಧ ಪಕ್ಷದದವರು ಸಿದ್ದರಾಮಯ್ಯ ಮತ್ತು ಡಿ.ಕೆ‌.ಶಿವಕುಮಾರ್ ನಡುವೆ ರಾಜಕೀಯ ಸಂಬಂಧ ಹಳಸಿದೆ ಎಂದು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇಬ್ಬರ ನಡುವಿನ ಸಂಬಂಧ ಚೆನ್ನಾಗಿದ್ದು, ಈ ವಿಚಾರವಾಗಿ ಮುಖಂಡರು ಹಾಗೂ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಡಿ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ವ ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗಬೇಕು ಎನ್ನುವ ದೃಷ್ಟಿಯಿಂದಾದರೂ ಅವರು ಚುನಾವಣೆ ಕಣದಿಂದ ಹಿಂದೆ ಸರಿಯಬಾರದು. ಸ್ಪರ್ಧೆ ಮಾಡುವಂತೆ ಮನವೊಲಿಸುತ್ತೇವೆ. ಅವರ ರಾಜಕೀಯ ಅನುಭವ ಮಾರ್ಗದರ್ಶನ ಪಕ್ಷಕ್ಕೆ ಬೇಕು’ ಎಂದು ಸುರೇಶ್‌ ಹೇಳಿದರು.

ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಮಾತನಾಡಿದರು. ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಡಿ.ಎ.ಗೋಪಾಲ್, ಕಲ್ಕೆರೆ ನಾರಾಯಣಸ್ವಾಮಿ, ಕಲ್ಕೆರೆ ಶ್ರೀನಿವಾಸ್, ಆಗರ ಪ್ರಕಾಶ್, ಡಿ.ಕೆ.ದೇವೇಂದ್ರ, ಗಗನ್ ಯಾದವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.