ADVERTISEMENT

ಸೆ. 16ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ: ಸಿದ್ದರಾಮಯ್ಯ

ಕೋವಿಡ್‌, ಭ್ರಷ್ಟಾಚಾರ, ಡ್ರಗ್‌ ಮಾಫಿಯಾ, ಗಲಭೆ, ವಿವಿಧ ಮಸೂದೆಗಳು, ಜಿಎಸ್‌ಟಿ ಕುರಿತು ಸದನದಲ್ಲಿ ಚರ್ಚಿಸಲು ಕಾಂಗ್ರೆಸ್‌ ಸಜ್ಜು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 12:17 IST
Last Updated 7 ಸೆಪ್ಟೆಂಬರ್ 2020, 12:17 IST
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಕಾರಣ, ಇದೇ ತಿಂಗಳ 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಉಭಯ ಸದನದ ಪಕ್ಷದ ಸದಸ್ಯರ ಜೊತೆ ಚರ್ಚಿಸಲಾಗುವುದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಕ್ಷದ ಶಾಸಕರ ಜೊತೆ ಸೋಮವಾರ ಆನ್‌ಲೈನ್‌ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ ಮಾಫಿಯಾ, ಡಿ.ಜೆ. ಹಳ್ಳಿ ಘಟನೆ, ಜಿಎಸ್‍ಟಿ ಮತ್ತು ವಿವಿಧ ಮಸೂದೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ’ ಎಂದರು.

ಡ್ರಗ್ ಮಾಫಿಯಾ: ‘ನಮ್ಮ ಸರ್ಕಾರದ ಸಮಯದಲ್ಲಿ ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿತ್ತು. ಎನ್‍ಸಿಬಿಯವರು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿಸಿಬಿಯೂ ತನಿಖೆಯಲ್ಲಿ ಕೈ ಜೋಡಿಸಿದೆ. ವಿದ್ಯಾರ್ಥಿಗಳು, ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು ಸೇರಿದಂತೆ ಈ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಹಕಾರವಿದೆ’ ಎಂದು ಹೇಳಿದರು.

ADVERTISEMENT

‘ಪೊಲೀಸರ ಬಳಿ ಸಾಕ್ಷ್ಯಾಧಾರ ಇದ್ದರೆ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ. ನಟಿ ರಾಗಿಣಿ ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿರುವ ಫೋಟೊ ಮತ್ತು ವಿಡಿಯೊ ಇದೆ. ತನಿಖೆ ನಡೆಯಲಿ. ಇದಕ್ಕೆ ನಮ್ಮ ತಕರಾರು ಏನೂ ಇಲ್ಲ. ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರನ್ನು ತನಿಖೆಯಿಂದ ಪಾರು ಮಾಡಲು ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮಾತಿಗೆ ಹೇಳಬಾರದು. ನನಗಂತೂ ಆ ಕುರಿತು ಮಾಹಿತಿ ಇಲ್ಲ. ಆ ಕುರಿತು ಅಧಿವೇಶನದಲ್ಲಿಯೂ ಚರ್ಚೆ ಮಾಡಲು ನಿರ್ಧರಿಸಿದ್ದೇವೆ’ ಎಂದರು.

‘ಡ್ರಗ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹಮದ್ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆ ಇದೆಯೇ. ಸಾಕ್ಷ್ಯ ಇದ್ದರೆ ಪೊಲೀಸರಿಗೆ ತೋರಿಸಲಿ. ರಾಜಕಾರಣಕ್ಕಾಗಿ ಸುಖಾಸುಮ್ಮನೆ ಒಬ್ಬರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳಲಿ. ತನಿಖೆ ಮಾಡುತ್ತಿರುವುದು ನಾನು ಅಥವಾ ಮಾಧ್ಯಮದವರಲ್ಲ. ಪೊಲೀಸರು ಆ ಕೆಲಸ ಮಾಡುತ್ತಿದ್ದಾರೆ. ಯಾರೇ ಆರೋಪ ಮಾಡಿದ್ದರೂ ತನಿಖೆ ನಡೆಯಲಿ. ಸಾಕ್ಷ್ಯಾಧಾರ ಸಿಕ್ಕರೆ ಪೊಲೀಸರು ಕ್ರಮ ಕೈಗೊಳ್ಳಲಿ. ಅದಕ್ಕೆ ನಾವು ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಲಿ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೆರೆದಿದ್ದ ಕೋವಿಡ್ ಆರೈಕೆ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಂಕಿತರು ಹೋಂ ಕ್ವಾರಂಟೈನ್‌ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕೇಂದ್ರ ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದೂ ಅವರು ಹೇಳಿದರು.

ಕೈಗಾರಿಕೆ ವಲಯದ ಕುಸಿತ: ‘ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ರಿಂದ 17ನೇ ಸ್ಥಾನಕ್ಕೆ ಕುಸಿದಿದೆ. 2017-18ರಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿತ್ತು. ಅದಕ್ಕೂ ಮೊದಲು 2012-13ನೇ ಸಾಲಿನಲ್ಲಿ 13ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಹೋಗಿದೆ. ಅದಕ್ಕೆ ಈ ಹಿಂದೆ ಆಡಳಿತ ನಡೆಸಿದವರು ಕಾರಣ ಎಂದು ಬಿಜೆಪಿಯ ವಿಜಯೇಂದ್ರ ಅವರು ಹೇಳುತ್ತಾರೆ. ಬಿಜೆಪಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿ ಇಲ್ಲವೇ. ಸರ್ಕಾರ ನಡೆಸುತ್ತಿರುವವರು ಏನನ್ನು ಕಡಿದು ಕಟ್ಟೆ ಹಾಕಿದ್ದಾರೆ. 17ನೇ ಸ್ಥಾನಕ್ಕೆ ಹೋಗಲು 8ನೇ ಸ್ಥಾನದಲ್ಲಿದ್ದಾಗ ಸರ್ಕಾರ ನಡೆಸಿದವರು ಕಾರಣವೇ ಅಥವಾ 17ನೇ ಸ್ಥಾನದಲ್ಲಿರುವಾಗ ಇರುವ ಸರ್ಕಾರ ಕಾರಣವೇ ? ಜನರಿಗೆ ತಪ್ಪು ಮಾಹಿತಿ ಕೊಡಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವರ್ಗವೋ ನರಕವೋ: ‘ಖಜಾನೆಯಲ್ಲಿ ಹಣ ಇಲ್ಲ ಎಂಬುದಕ್ಕೆ ಕೊರೊನಾ ಕಾರಣ ಎಂದು ಹೇಳುತ್ತಾರೆ. ಜಾಗತಿಕ ಬ್ಯಾಂಕ್‍ಗಳ ಮೂಲಕ ಸಾಲ ತಂದು ಕೇಂದ್ರ ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಸಬ್ಸಿಡಿ ಇಲ್ಲ, ಸಂಬಳ ಕೊಡಲಾಗದು, ಜಿಎಸ್‌ಟಿ ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಾದರೆ ಅಧಿಕಾರದಲ್ಲಿ ಯಾಕೆ ಇರಬೇಕು. ಇದನ್ನು ಹೇಳಲು ಜನರು ಬಿಜೆಪಿಯವರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿ ಕೂರಿಸಿದ್ದಾರೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

’ಈ ರೀತಿ ಎಲ್ಲವನ್ನೂ ನಿರಾಕರಿಸುವುದು ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಜನರಿಗೆ ಮಾಡುವ ದ್ರೋಹ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎಲ್ಲವೂ ದೇವರ ಆಟ ಎಂದು ಹೇಳುವುದಾದರೆ ಸರ್ಕಾರದ ಜವಾಬ್ದಾರಿ ಏನು. ಇದಕ್ಕೆಲ್ಲ ನರೇಂದ್ರ ಮೋದಿಯವರ ಸರ್ಕಾರವೇ ಕಾರಣ. ಜಿಡಿಪಿ ಕಡಿಮೆಯಾದರೆ ಉದ್ಯೋಗ ಸೃಷ್ಟಿ ಆಗುವುದಿಲ್ಲ. ದೇಶದಲ್ಲಿ ಈಗ 12 ಕೋಟಿಯಿಂದ 15 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ವರದಿಗಳು ಹೇಳುತ್ತವೆ. ದೆಹಲಿಯಲ್ಲಿ ಮತ್ತು ಕರ್ನಾಟದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗ ಮಾಡುತ್ತೇವೆ ಎಂದರು. ಇದು ಸ್ವರ್ಗವೋ, ನರಕವೋ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.