
ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರತಿಭಟನೆಗೆ ಜನಸಾಗರವೇ ಹರಿದು ಬಂದಿತ್ತು. ಇದರಿಂದಾಗಿ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ, ಸವಾರರು ಹೈರಾಣರಾದರು.
ನಗರ ಪ್ರದೇಶ ಮಾತ್ರವಲ್ಲದೇ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಬಂದ ಕಾರಣ ಸ್ವಾತಂತ್ರ್ಯ ಉದ್ಯಾನ ಭರ್ತಿಯಾಗಿತ್ತು. ವೇದಿಕೆ ಬಳಿ ತೆರಳಲು ಅವಕಾಶ ನೀಡದ ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಭಾರಿ ಜನಸ್ತೋಮ ಸೇರಿದ ಕಾರಣ ಮೆಜೆಸ್ಟಿಕ್ ಹಾಗೂ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪೊಲೀಸರು ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು.
ಮೆಜೆಸ್ಟಿಕ್, ಸಂಗೊಳ್ಳಿ ರಾಯಣ್ಣ ವೃತ್ತ, ಆನಂದರಾವ್ ವೃತ್ತದ ಮೇಲ್ಸೇತುವೆ, ಶೇಷಾದ್ರಿ ರಸ್ತೆ, ಕೆ.ಆರ್.ವೃತ್ತ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತವು. ಈ ರಸ್ತೆಗಳಿಗೆ ಹೊಂದಿಕೊಂಡಂತಿರುವ ರಸ್ತೆಗಳಲ್ಲೂ ಸಂಚಾರ ಅಸ್ತವ್ಯಸ್ತವಾಯಿತು. ವಾಹನ ಸವಾರರು ಮುಂದೆಯೂ ಹೋಗಲಾಗದೆ ಹಿಂದೆಯೂ ಚಲಿಸಲಾರದೆ ಪರದಾಡಿದರು.
ಕಚೇರಿ ಹಾಗೂ ವೈಯಕ್ತಿಕ ಕೆಲಸಕ್ಕೆ ಹೊರಟಿದ್ದ ನಗರವಾಸಿಗಳಿಗೆ ದಟ್ಟಣೆ ಬಿಸಿ ತಟ್ಟಿತು. ಸಕಾಲಕ್ಕೆ ಕಚೇರಿ ತಲುಪಲಾಗದೆ ತೊಂದರೆ ಅನುಭವಿಸಿದರು. ಹೊರ ಊರುಗಳಿಗೆ ಹೋಗಲು ರೈಲು ಮತ್ತು ಬಸ್‍ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲಾಗಲಿಲ್ಲ. ಆಟೊ, ಬಿಎಂಟಿಸಿ ಬಸ್‍ಗಳಲ್ಲಿ ರೈಲು ನಿಲ್ದಾಣ, ಮೆಜೆಸ್ಟಿಕ್‍ನತ್ತ ಹೋಗುತ್ತಿದ್ದವರು ಟ್ರಾಫಿಕ್ ಜಾಮ್‍ನಿಂದಾಗಿ ಮಾರ್ಗ ಮಧ್ಯೆಯೇ ವಾಹನಗಳಿಂದ ಇಳಿದು ನಿಲ್ದಾಣದತ್ತ ಹೆಜ್ಜೆ ಹಾಕಿದರು.
ಪ್ರತಿಭಟನೆಯಿಂದಾಗಿ ವಾಹನ ದಟ್ಟಣೆ ಸಾಧ್ಯತೆಯ ಬಗ್ಗೆ ಸಂಚಾರ ಪೊಲೀಸರು ಮೊದಲೇ ಮಾಹಿತಿ ನೀಡಿದ್ದರು. ಅಲ್ಲದೆ, ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳ ಬದಲು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಿದ್ದರು. ಸಂಚಾರ ನಿರ್ವಹಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.