ADVERTISEMENT

ಎಸ್ಎಫ್ಐ ದಾಳಿಗೆ ಪ್ರತೀಕಾರ: ಬೆಂಗಳೂರು ಸಿಪಿಐ ಕಚೇರಿಯಲ್ಲಿ ಕಾಂಗ್ರೆಸ್ ದಾಂಧಲೆ

ಡಿಕೆಶಿಗೆ ಪತ್ರ ಬರೆದು ಸಾತಿ ಸುಂದರೇಶ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 1:56 IST
Last Updated 26 ಜೂನ್ 2022, 1:56 IST
   

ಬೆಂಗಳೂರು: ನಗರದಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಮುಖ್ಯ ಕಚೇರಿಗೆ ನುಗ್ಗಿದ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ದಾಂದಲೆ ಮಾಡಿದ್ದು, ಈ ಘಟನೆಯನ್ನು ಸಿಪಿಐ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರ ಕೇರಳದ ಕಚೇರಿ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ವಾದದ (ಸಿಪಿಐ–ಎಂ) ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎಸ್‌ಎಫ್‌ಐ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು, ‘ಸಿಪಿಐ–ಎಂ’ ಕಚೇರಿ ಎಂಬುದಾಗಿ ಭಾವಿಸಿ ‘ಸಿಪಿಐ’ ಕಚೇರಿಗೆ ನುಗ್ಗಿ ಗಲಾಟೆ ಮಾಡಿರುವುದಾಗಿ ಗೊತ್ತಾಗಿದೆ. ಆದರೆ, ಘಟನೆ ಬಗ್ಗೆ ಯಾವುದೇ ದೂರು
ದಾಖಲಾಗಿಲ್ಲ.

ಘಟನೆ ಉಲ್ಲೇಖಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ‘ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದಿದ್ದಾರೆ.

ADVERTISEMENT

‘ವೈಯಾಲಿಕಾವಲ್ ಬಳಿಯ ಜೆ.ಡಿ. ಪಾರ್ಕ್‌ ಬಡಾವಣೆಯಲ್ಲಿರುವ ನಮ್ಮ ಪಕ್ಷದ ಕಚೇರಿಗೆ ಮಧ್ಯಾಹ್ನ 12.30ರ ಸುಮಾರಿಗೆ ಏಕಾಏಕಿ ನುಗ್ಗಿದ್ದ ನಿಮ್ಮ 20ಕ್ಕೂ ಹೆಚ್ಚು (ಕಾಂಗ್ರೆಸ್) ಕಾರ್ಯಕರ್ತರು, ಬಾವುಟ ಹಿಡಿದು ಘೋಷಣೆ ಕೂಗುತ್ತಿದ್ದರು. ದಾಳಿ ಬಗ್ಗೆ ವಿಚಾರಿಸಿದಾಗ, ಎಸ್‌ಎಫ್‌ಐ ಕಚೇರಿಗೆ ಮುತ್ತಿಗೆ ಹಾಕಲು ಬಂದಿರುವುದಾಗಿ ಹೇಳಿದ್ದರು. ನಮ್ಮದು ಸಿಪಿಐ ಕಚೇರಿ. ಎಸ್‌ಎಫ್‌ಐ ಕಚೇರಿಯಲ್ಲವೆಂದು ಮನವರಿಕೆ ಮಾಡಿಕೊಟ್ಟರೂ ದಾಂದಲೆ ಮುಂದುವರಿಸಿದ್ದರು. ನನ್ನನ್ನು ಸೇರಿದಂತೆ ಹಲವರನ್ನು ಅಕ್ರಮವಾಗಿ ತಡೆದಿದ್ದರು.’

‘ಗಲಭೆಕೋರ ಮನಸ್ಥಿತಿ ಹೊಂದಿರುವ ಕಾರ್ಯಕರ್ತರ ವರ್ತನೆ ಕಾಂಗ್ರೆಸ್ ಪಕ್ಷದ ಘನತೆಗೆ ಧಕ್ಕೆ ಉಂಟು ಮಾಡಲಿದೆ. ಫ್ಯಾಸಿವಾದಿ ಶಕ್ತಿಗಳನ್ನು ಸೋಲಿಸಲು ನಾವೆಲ್ಲ ಒಂದಾಗಬೇಕಾಗಿರುವ ಕಾಲದಲ್ಲಿ ಇಂಥ ದುರ್ಘಟನೆ ನಡೆಯುತ್ತಿರುವುದು ವಿಷಾದನೀಯ’ ಎಂದೂ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.