ADVERTISEMENT

ಬೆಂಗಳೂರು | ಮೊಬೈಲ್ ಕರೆ ಗಲಾಟೆ: ಬೆಂಕಿ ಹಚ್ಚಿ ಕಾನ್‌ಸ್ಟೆಬಲ್ ಕೊಲೆ

ಒಂದೇ ಠಾಣೆಯಲ್ಲಿ ಕೆಲಸ ಮಾಡುವಾಗ ಪರಿಚಯ, ಸಲುಗೆ - ಕೃತ್ಯ ಎಸಗಿದ್ದ ಆರೋಪದಡಿ ಗೃಹ ರಕ್ಷಕಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 14:46 IST
Last Updated 21 ಡಿಸೆಂಬರ್ 2023, 14:46 IST
ಸಂಜಯ್
ಸಂಜಯ್   

ಬೆಂಗಳೂರು: ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ವಿಶೇಷ ಭದ್ರತೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಸಂಜಯ್ (30) ಅವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಗೃಹ ರಕ್ಷಕಿ ರಾಣಿ ಅವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಸಂಜಯ್, ಬಸವನಗುಡಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿನಿಂದ ಅವರನ್ನು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ವಿಶೇಷ ಭದ್ರತೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಡಿ. 6ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಂಜಯ್ ಕೊಲೆಗೆ ಯತ್ನಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಾಯಾಳು ಸಂಜಯ್ ಹೇಳಿಕೆ ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಂಜಯ್ ಮೃತಪಟ್ಟಿದ್ದರಿಂದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎನ್ನಲಾದ ಆರೋಪಿ ರಾಣಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.

ADVERTISEMENT

ಐದು ವರ್ಷಗಳ ಪರಿಚಯ:

‘ಸಂಜಯ್ ಅವರು 2018ರಲ್ಲಿ ಬಸವನಗುಡಿ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ವೃತ್ತಿ ಆರಂಭಿಸಿದ್ದರು. ಮಂಡ್ಯದ  ರಾಣಿ ಸಹ ಅದೇ ಠಾಣೆಯಲ್ಲಿ ಗೃಹ ರಕ್ಷಕಿ ಆಗಿದ್ದರು. ವಿವಾಹಿತೆಯಾಗಿದ್ದ ಅವರಿಗೆ ಇಬ್ಬರು ಮಕ್ಕಳಿದ್ದರು. ಅಷ್ಟಲಕ್ಷ್ಮಿ ಬಡಾವಣೆಯಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸದ ಸ್ಥಳದಲ್ಲಿಯೇ ಸಂಜಯ್ ಹಾಗೂ ರಾಣಿ ನಡುವೆ ಸ್ನೇಹ ಏರ್ಪಟ್ಟಿತ್ತು. 2020ರಿಂದ ಇಬ್ಬರ ನಡುವೆ ಸಲುಗೆಯೂ ಇತ್ತು. ಆಗಾಗ ಇಬ್ಬರೂ ಸುತ್ತಾಡುತ್ತಿದ್ದರು. ಪತಿ ಇಲ್ಲದ ಸಮಯದಲ್ಲಿ ಸಂಜಯ್‌, ರಾಣಿ ಮನೆಗೂ ಹೋಗಿ ಬರುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

ಕೊಲೆಗೆ ಕಾರಣವಾದ ಮೊಬೈಲ್ ಕರೆ:

ರಾಣಿ, ಗೃಹ ರಕ್ಷಕಿಯಾಗಿದ್ದಕೊಂಡೇ ಬೆಳ್ಳಂದೂರಿನ ಕಂಪನಿಯೊಂದರಲ್ಲೂ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರು. ಸಂಜಯ್ ಜೊತೆ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಜಯ್‌, ಡಿ. 6ರಂದು ಕೆಲಸ ಮುಗಿಸಿ ತ್ಯಾಗರಾಜನಗರದಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ಸಂಜೆ 6 ಗಂಟೆಗೆ ಅವರಿಗೆ ಕರೆ ಮಾಡಿದ್ದ ರಾಣಿ, ತಮ್ಮ ಮನೆಗೆ ಬರುವಂತೆ ಹೇಳಿದ್ದರು. ಮನೆಗೆ ಬಂದಿದ್ದ ಸಂಜಯ್ ಹಾಗೂ ರಾಣಿ, ಖಾಸಗಿ ಕ್ಷಣಗಳನ್ನು ಕಳೆದಿದ್ದರು.’

‘ರಾಣಿ ಮೊಬೈಲ್‌ಗೆ ಯುವಕರೊಬ್ಬರ ಕರೆ ಬಂದಿತ್ತು. ಅವರ ಜೊತೆ ರಾಣಿ ಸಲುಗೆಯಿಂದ ಮಾತನಾಡಿದ್ದರು. ಯುವಕ ಯಾರು ಎಂದು ಪ್ರಶ್ನಿಸಿದ್ದ ಸಂಜಯ್, ‘ನೀನು ಯಾರೊಂದಿಗೂ ಮಾತನಾಡಬಾರದು. ನನ್ನ ಜೊತೆ ಮಾತ್ರ ಮಾತನಾಡಬೇಕು’ ಎಂದು ತಾಕೀತು ಮಾಡಿದ್ದರು. ಈ ಕರೆ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತೆಂದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನನ್ನ ಮೊಬೈಲ್. ನನ್ನ ಇಷ್ಟ. ಅದನ್ನು ಪ್ರಶ್ನಿಸಿದರೆ, ನಿನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತೇನೆ’ ಎಂದು ರಾಣಿ ಬೆದರಿಸಿದ್ದರು. ಕೋಪಗೊಂಡಿದ್ದ ಸಂಜಯ್, ಸಮೀಪದ ಬಂಕ್‌ಗೆ ಹೋಗಿ ಬಾಟಲಿಯಲ್ಲಿ 1 ಲೀಟರ್ ಪೆಟ್ರೋಲ್ ತಂದಿದ್ದರು. ‘ಪೆಟ್ರೋಲ್ ಸುರಿದು ಬೆಂಕಿ ಹಚ್ಚೇಬಿಡು ನೋಡೋಣ’ ಎಂದಿದ್ದರು. ಬಾಟಲಿ ಕಸಿದುಕೊಂಡಿದ್ದ ರಾಣಿ, ಸಂಜಯ್ ಮೈ ಮೇಲೆ ಪೆಟ್ರೋಲ್ ಸುರಿದು ಕಡ್ಡಿ ಗೀರಿ ಬೆಂಕಿ ಹಚ್ಚಿದ್ದರೆಂದು ಹೇಳಲಾಗುತ್ತಿದೆ. ಕ್ಷಣಮಾತ್ರದಲ್ಲಿ ಸಂಜಯ್ ದೇಹಕ್ಕೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ಸಂಜಯ್ ಚೀರಾಡುತ್ತಿದ್ದರು. ರಕ್ಷಣೆಗೆ ಹೋಗಿದ್ದ ರಾಣಿ ಅವರು ನೀರು ಹಾಕಿ ಬೆಂಕಿ ನಂದಿಸಿದ್ದರು. ನಂತರ, ದ್ವಿಚಕ್ರ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆಕಸ್ಮಿಕವೆಂದಿದ್ದ ಸಂಜಯ್:

‘ಡಿ. 7ರಂದು ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿದ್ದರು. ‘ಈ ಘಟನೆ ಆಕಸ್ಮಿಕ’ ಎಂದು ಸಂಜಯ್ ಹೇಳಿಕೆ ನೀಡಿದ್ದರು. ಡಿ. 19ರಂದು ಪುನಃ ಹೇಳಿಕೆ ನೀಡಿದ್ದ ಸಂಜಯ್, ‘ರಾಣಿ ಬೆದರಿಕೆ ಹಾಕಿದ್ದರಿಂದ, ಇದು ಆಕಸ್ಮಿಕ ಘಟನೆ ಎಂಬುದಾಗಿ ಸುಳ್ಳು ಹೇಳಿದ್ದೆ’ ಎಂಬುದಾಗಿ ತಿಳಿಸಿದ್ದರು. ಈ ಸಂಗತಿಯನ್ನು ತಾಯಿ ಬಳಿಯೇ ಹೇಳಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

‘ಘಟನೆ ಸಂಬಂಧ ಹನುಮಂತನಗರ ಠಾಣೆಯಲ್ಲಿ ಮೊದಲಿಗೆ ಎಫ್‌ಐಆರ್ ದಾಖಲಾಗಿತ್ತು. ಘಟನೆ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಪುಟ್ಟೇನಹಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.  

‘ಕೊಲೆಯಲ್ಲಿ ಅನುಮಾನ’
‘ಸಂಜಯ್ ಅವರನ್ನು ರಾಣಿ ಕೊಲೆ ಮಾಡಿದ್ದಾರೆಂಬ ಆರೋಪದಲ್ಲಿ ಸಾಕಷ್ಟು ಅನುಮಾನಗಳಿವೆ. ಸಂಜಯ್ ಅವರೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆಯೇ? ಅಥವಾ ರಾಣಿ ಅವರು ಬೆಂಕಿ ಹಚ್ಚಿದ್ದಾರೆಯೇ? ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.