ಬೆಂಗಳೂರು: ಮೈಸೂರು–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಗೋಲ್ ಗುಂಬಜ್ ರೈಲಿನಲ್ಲಿ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದ ಪ್ರಕರಣದಲ್ಲಿ ಆರು ಮಂದಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ರಸ್ತೆಯ ಕಸ್ತೂರಬಾ ನಗರ ನಿವಾಸಿಗಳಾದ ಮೊಹಮದ್ ಇರ್ಫಾನ್(19), ದರ್ಶನ್(21), ಮಹಮದ್ ಇಮ್ರಾನ್(20), ಮೋಹಿನ್ ಪಾಷ(21), ಮುನಿರಾಜು ಅಲಿಯಾಸ್ ಚಿನ್ನಿ(24) ಹಾಗೂ ಜೆ.ಜೆ.ನಗರದ ಫೈಸಲ್ ಖಾನ್(22) ಬಂಧಿತರು. ಘಟನೆ ನಡೆದು 24 ತಾಸಿನ ಒಳಗಾಗಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಗೋಲ್ ಗುಂಬಜ್ ರೈಲಿನಲ್ಲಿ ಕರ್ತವ್ಯ ನಿರತ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸತೀಶ್ ಚಂದ್ರ ಅವರಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದರು. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ರೈಲಿನಲ್ಲಿ ಕಳ್ಳತನ ಪ್ರಕರಣಗಳ ಪತ್ತೆ, ತಡೆಗಟ್ಟುವ ಕರ್ತವ್ಯಕ್ಕೆ ಸತೀಶ್ ಚಂದ್ರ ಅವರನ್ನು ನಿಯೋಜಿಸಲಾಗಿತ್ತು. ರೈಲಿನ ಎಸ್ ಬೋಗಿಯ ಶೌಚಾಲಯದ ಎದುರು ಆರು ಮಂದಿ ಗುಂಪಿತ್ತು. ಇಬ್ಬರು ಆರೋಪಿಗಳು ರೈಲು ಬೋಗಿಯ ಬಳಿ ಸಿಗರೇಟ್ ಸೇದುತ್ತಿದ್ದರೆ, ಉಳಿದ ನಾಲ್ವರು ಬಾಗಿಲ ಬಳಿ ಕುಳಿತು ಅಸಭ್ಯವಾಗಿ ವರ್ತಿಸುತ್ತಿದ್ದರು. ಆಗ ಕಾನ್‌ಸ್ಟೆಬಲ್ ಬುದ್ಧಿ ಬುದ್ಧಿಮಾತು ಹೇಳಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದರು. ಅಷ್ಟರಲ್ಲಿ ರೈಲು ಮದ್ದೂರು ರೈಲು ನಿಲ್ದಾಣಕ್ಕೆ ಬಂದಿತ್ತು. ಸ್ಥಳೀಯರ ನೆರವಿನಿಂದ ಇಬ್ಬರು ಆರೋಪಿಗಳನ್ನು ಹಿಡಿದು ಬಂಧಿಸಲಾಗಿತ್ತು. ನಾಲ್ವರು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಬಳಿಕ ವಿಶೇಷ ತಂಡ ರಚಿಸಿ, 24 ತಾಸಿನ ಒಳಗೆ ಉಳಿದ ನಾಲ್ವರನ್ನು ಬಂಧಿಸಲಾಯಿತು ಎಂದು ರೈಲ್ವೆ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.