ADVERTISEMENT

ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಬೆಂಗಳೂರು ನಗರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಎಚ್.ಕೆ. ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 16:12 IST
Last Updated 26 ನವೆಂಬರ್ 2025, 16:12 IST
ಸಂವಿಧಾನ ಸೈನಿಕರ ಸಮಾವೇಶದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ವಾಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಪ್ರಜಾವಾಣಿ ಚಿತ್ರ
ಸಂವಿಧಾನ ಸೈನಿಕರ ಸಮಾವೇಶದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ವಾಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂವಿಧಾನವು ಪೂಜಿಸುವ ವಸ್ತುವಲ್ಲ. ಅದು ಉದಾತ್ತ ಉದ್ದೇಶ ಹೊಂದಿರುವ ಪವಿತ್ರ ಗ್ರಂಥವಾಗಿದ್ದು, ಆತ್ಮಸಾಕ್ಷಿಯಿಂದ ಅದಕ್ಕೆ ಬದ್ಧರಾಗಿರಬೇಕು. ಅದುವೇ ನಾವು ಮಾಡುವ ನೈಜ ರಾಷ್ಟ್ರಸೇವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು. 

ಡಾ. ಮನಮೋಹನಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ಸಂವಿಧಾನ ಸೈನಿಕರ ಸಮಾವೇಶದಲ್ಲಿ ಭಾರತ ಸಂವಿಧಾನದ ನಾಲ್ಕನೇ ದ್ವಿಭಾಷಾ ಆವೃತ್ತಿ ಪುಸ್ತಕವನ್ನು ಜನಾರ್ಪಣೆ ಮಾಡಿ, ಮಾತನಾಡಿದರು. 

‘ಧರ್ಮ ಗ್ರಂಥಗಳಲ್ಲಿ ಧರ್ಮದ ಹೆಜ್ಜೆ ಹಾಗೂ ಜೀವನ ವಿಧಾನಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಾವು ನಡೆಯಬೇಕಿದೆ. ಆದರೆ, ಆ ಗ್ರಂಥಗಳಿಗೆ ವಿಭೂತಿ, ಕುಂಕುಮ, ಗಂಧ ಹಚ್ಚಿ ದೇವರ ಮನೆಯಲ್ಲಿ ಇಡುವ ಕೆಲಸ ಮಾಡಲಾಗುತ್ತಿದೆ. ಬಸವಣ್ಣ ಅವರ ವಚನಗಳು ಸಹ ಭಾಷಣದ ವಸ್ತುಗಳಾಗಿವೆಯೇ ಹೊರತು, ವಚನಗಳ ಅನುಸಾರ ಯಾರು ನಡೆಯುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಕಳೆದ ಕೆಲ ವರ್ಷಗಳಿಂದ ಕೆಲವರು ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಅದರ ಆಶಯವನ್ನು ತಿರಸ್ಕರಿಸಿದ್ದಾರೆ. ಹೊರಗುತ್ತಿಗೆ ವ್ಯವಸ್ಥೆಯು ಸಂವಿಧಾನದ ಉಲ್ಲಂಘನೆಯಾಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸುವ ಚಿಂತನೆ ಸರ್ಕಾರಕ್ಕಿದ್ದು, ಆ ಪ್ರಯತ್ನ ಮಾಡುತ್ತಿದ್ದೇವೆ. ಸಂವಿಧಾನದ ಅನ್ವಯವೇ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಲಾಗಿದೆ’ ಎಂದರು. 

ಕರ್ನಾಟಕ ರಾಜ್ಯ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ.ಸಿ.ಎಸ್. ಪಾಟೀಲ, ‘ಸಂವಿಧಾನ ಸಜೀವ ಗ್ರಂಥವಾಗಿದ್ದು, ಅದು ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುತ್ತಾ ಬಂದಿದೆ. ಸಂವಿಧಾನದ ಬಗ್ಗೆ ಅರಿತು ಸಾಗಬೇಕು’ ಎಂದರು. 

ಡಾ. ಮನಮೋಹನಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲದ ಕುಲಪತಿ ಪ್ರೊ. ರಮೇಶ್ ಬಿ., ಕುಲಸಚಿವ ನವೀನ್ ಜೋಸೆಫ್, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಕೆ.ಆರ್. ಜಲಜಾ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.