
ಬೆಂಗಳೂರು: ‘ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳು ಯಾರು ಎನ್ನುವುದನ್ನು ಗುರುತಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ-2025 ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ಸಂವಿಧಾನವನ್ನು ವಿರೋಧಿಸುತ್ತಾರೆ’ ಎಂದರು.
‘ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ಈಗಲೂ ಮನುವಾದಿಗಳು ವಾದಿಸುತ್ತಾರೆ. ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯಗಳನ್ನು ನೀಡಿದ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನೀಡಿದ ಎಚ್ಚರಿಕೆ ಮಾತುಗಳನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಶೂದ್ರ ವರ್ಗದವರಿಗೆ ಆರ್ಥಿಕ ಶಕ್ತಿ ಬಂದಾಗ ಮಾತ್ರ ಜಾತಿ ದುರ್ಬಲವಾಗುತ್ತದೆ. ಅಸಮಾನತೆ ಇರುವ ದೇಶದಲ್ಲಿ ಸಮಾನತೆ ಸುಲಭವಾಗಿ ಬರುವುದಿಲ್ಲ. ಈ ಕಾರಣಕ್ಕಾಗಿಯೇ ಸಮಾನತೆ ಸಿಗುವವರೆಗೂ ಮೀಸಲಾತಿ ಇರಬೇಕು’ ಎಂದು ಅವರು ಪ‍್ರತಿಪಾದಿಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಭಾರತ ಶೈಕ್ಷಣಿಕ, ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಕಂಡರೂ ಪರಿಪೂರ್ಣ ಅಭಿವೃದ್ದಿಯನ್ನು ಈವರೆಗೂ ಕಾಣಲು ಆಗಿಲ್ಲ. ಕರ್ನಾಟಕದಲ್ಲಿ ಸಂವಿಧಾನ ಪೀಠಿಕೆಯನ್ನು ಶಾಲೆಯಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡುವ ಕೆಲಸ ನಮ್ಮ ಸರ್ಕಾರದಿಂದ ಆಗಿದೆ’ ಎಂದು ತಿಳಿಸಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತ ಕೆ.ರಾಕೇಶ್‌ಕುಮಾರ್ ಉಪಸ್ಥಿತರಿದ್ದರು.
ವಿಧಾನಸೌಧದ ಮೆಟ್ಟಿಲುಗಳಿಂದ ಅಂಬೇಡ್ಕರ್ ಭವನದವರೆಗೆ ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ಭಾಗಿಯಾದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.