ADVERTISEMENT

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 16:11 IST
Last Updated 15 ಡಿಸೆಂಬರ್ 2022, 16:11 IST
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಗುರುವಾರ ಭೂಮಿ ಪೂಜೆ ನೆರವೇರಿಸಿದರು
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಗುರುವಾರ ಭೂಮಿ ಪೂಜೆ ನೆರವೇರಿಸಿದರು   

ಬೆಂಗಳೂರು: ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3,546 ಎಕರೆ ಪ್ರದೇಶದಲ್ಲಿ ₹2,600 ಕೋಟಿ ವೆಚ್ಚದಲ್ಲಿ ಮುಂದಿನ 18 ತಿಂಗಳಲ್ಲಿ ಬಡಾವಣೆ ನಿರ್ಮಾಣವಾಗಲಿದೆ. ಸುಮಾರು 22 ಸಾವಿರ ನಿವೇಶನಗಳನ್ನು 60:40 ಅನುಪಾತದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಗುರಿಯನ್ನು ಬಿಡಿಎ ಹೊಂದಿದೆ.

ಹಾರೋಹಳ್ಳಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ಜಾರಕಬಂಡೆ ಕಾವಲ್, ವೀರಸಾಗರ, ದೊಡ್ಡಬೆಟ್ಟಹಳ್ಳಿ, ಶಾಮರಾಜಪುರ, ವಡೇರಹಳ್ಳಿ, ಮೇಡಿಅಗ್ರಹಾರ, ಬ್ಯಾಲಕೆರೆ, ಕಾಳತಮ್ಮನಹಳ್ಳಿ, ಗುಣಿಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮಿಪುರ, ಗಾಣಿಗರಹಳ್ಳಿ, ಕೆಂಪಾಪುರ ಗ್ರಾಮಗಳಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣವಾಗಲಿದೆ.

ADVERTISEMENT

ವಿಶ್ವನಾಥ್ ಮಾತನಾಡಿ, ‘ಈ ಹಿಂದಿನ ಬಡಾವಣೆಗಳಂತೆ ಇದು ಸಹ ಆಗುತ್ತದೆ ಎನ್ನುವ ಆತಂಕ ಇತ್ತು. ಆದರೆ, ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿ ಬಡಾವಣೆ ನಿರ್ಮಿಸಲು ಅನುಮತಿ ನೀಡಿದೆ‘ ಎಂದರು.

‘ಫೆಬ್ರುವರಿ ವೇಳೆಗೆ ರೈತರಿಗೆ ಮೊದಲ ಕಂತಿನಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡುವ ಉದ್ದೇಶವಿದೆ. ಭೂಮಿ ನೀಡಿದ ರೈತರಿಗೆ ಉಚಿತವಾಗಿ ನಿವೇಶನ ನೋಂದಣಿ ಮಾಡಿಕೊಡಲಾಗುತ್ತದೆ.ರೈತರು ತಮಗೆ ಹಣದ ರೂಪದಲ್ಲಿ ಅಥವಾ 60:40 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಪಡೆಯಬಹುದಾಗಿದೆ’ ಎಂದರು.

‘ಕಾರಂತ ಬಡಾವಣೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ ಜಾಗದಲ್ಲಿ ಸುಮಾರು 4500 ಮನೆಗಳನ್ನು ನೆಲಸಮ ಮಾಡಬೇಕಿತ್ತು. ನಾವು ಸುಪ್ರೀಂ ಕೋರ್ಟ್ ಸಮಿತಿಗೆ ಮನವಿ ಮಾಡಿಕೊಂಡಿದ್ದರಿಂದ ಈ ಮನೆಗಳನ್ನು ನೆಲಸಮ ಮಾಡದಿರುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ, ಸುಮಾರು 5,000 ರೆವಿನ್ಯೂ ನಿವೇಶನದಾರರಿಗೆ ನಿಗದಿತ ಶುಲ್ಕ ಕಟ್ಟಿಸಿಕೊಂಡು ಬದಲಿ ನಿವೇಶನ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಬಿಡಿಎ ಆಯುಕ್ತ ಕುಮಾರ ನಾಯಕ್ ಮಾತನಾಡಿ, ‘ಬೆಂಗಳೂರು ನಗರದ ವಿಸ್ತರಣೆಯಲ್ಲಿ ರೈತರ ತ್ಯಾಗ ಅತ್ಯಮೂಲ್ಯವಾದುದು. ಕಾರಂತ ಬಡಾವಣೆಗೆ ಭೂಮಿ ನೀಡಿರುವ ರೈತರ ಹಿತ ಕಾಪಾಡುವಲ್ಲಿ ಬಿಡಿಎ ಬದ್ಧವಾಗಿದೆ. ಯಾರಿಗೂ ಕಷ್ಟವಾಗದ ರೀತಿಯಲ್ಲಿ ನಾವು ಬಡಾವಣೆಯನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ತಿಳಿಸಿದರು.

ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ, ಕಾರ್ಯದರ್ಶಿ ಶಾಂತರಾಜು, ಅಧಿಕಾರಿಗಳಾದ ನಂಜುಂಡೇಗೌಡ, ರವಿಕುಮಾರ್, ಡಾ.ಸೌಜನ್ಯ, ಡಾ.ಬಸಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.