ADVERTISEMENT

‘ಕೊರೊನಾ’ವೇ ಬಂಡವಾಳ: ಸೈಬರ್ ಖದೀಮರ ಗ್ಯಾಂಗ್‌ ಬಲೆಗೆ

ನಕಲಿ ಜಾಲತಾಣ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ: ಕ್ಯಾಮರೂನ್ ಪ್ರಜೆಗಳಿಬ್ಬರು ಸೇರಿ ನಾಲ್ವರ ಬಂಧನ

ಸಂತೋಷ ಜಿಗಳಿಕೊಪ್ಪ
Published 16 ಜುಲೈ 2020, 19:35 IST
Last Updated 16 ಜುಲೈ 2020, 19:35 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಕೊರೊನಾ ಸೋಂಕು ನಿವಾರಕ ಔಷಧಿ ಮಾರಾಟದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಸೈಬರ್ ಖದೀಮರ ಜಾಲವನ್ನು ಬನಶಂಕರಿ ಪೊಲೀಸರು ಭೇದಿಸಿದ್ದಾರೆ.

ನಕಲಿ ಜಾಲತಾಣಗಳನ್ನು ಸೃಷ್ಟಿಸಿ, ಅದರ ಮೂಲಕ ಜನರನ್ನು ಸಂಪರ್ಕಿಸಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಕ್ಯಾಮರೂನ್ ದೇಶದ ಎಗ್ಬೆ ಹ್ಯೂಬರ್ಟ್ (28), ಎನ್ದೇಪ್ ಕಾಲೀನ್ ನಾಚಾ (24), ಅಸ್ಸಾಂನ ಬದ್ರೂಲ್ ಹಸನ್ ಲಸ್ಕರ್ (24) ಹಾಗೂ ದಿದಾರುಲ್ ಆಲೋಮ್ ಬಾರ್‌ಬುಯ್ಯಾ (24) ಬಂಧಿತರು. ಅವರಿಂದ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್, ಪಾನ್ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ADVERTISEMENT

‘ವ್ಯಾಪಾರ ವೀಸಾದಡಿ ನಗರಕ್ಕೆ ಬಂದಿದ್ದ ಹ್ಯೂಬರ್ಟ್ ಹಾಗೂ ಎನ್ದೇಪ್‌, ಕಮ್ಮನಹಳ್ಳಿಯ ರೆಡ್ಡಿ ಲೇಔಟ್‌ನಲ್ಲಿ ವಾಸವಿದ್ದರು. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರಿಬ್ಬರಿಗೆ ಬದ್ರೂಲ್‌ ಹಾಗೂ ದಿದಾರುಲ್ ಪರಿಚಯವಾಗಿತ್ತು. ನಂತರ ನಾಲ್ವರು ಗ್ಯಾಂಗ್‌ ಕಟ್ಟಿಕೊಂಡು ಸೈಬರ್ ಕೃತ್ಯ ಎಸಗಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

ಕೊರೊನಾವೇ ಬಂಡವಾಳ: ‘ಇಡೀ ಜಗತ್ತಿನಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ಅದರ ನಿವಾರಣೆಗೆ ತಮ್ಮ ಬಳಿ ಔಷಧಿ ಇರುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ತಮ್ಮ ಕೃತ್ಯಕ್ಕೆಂದೇ ನಕಲಿ ಜಾಲತಾಣಗಳನ್ನು ಸೃಷ್ಟಿಸಿದ್ದ ಆರೋಪಿಗಳು, ಕೊರೊನಾದಿಂದ ಗುಣಮುಖವಾಗುವ ಅಂತರರಾಷ್ಟ್ರೀಯ ಮಟ್ಟದ ಔಷಧಿಗಳು ತಮ್ಮ ಬಳಿ ಇರುವುದಾಗಿ ಜಾಹೀರಾತು ನೀಡುತ್ತಿದ್ದರು. ಶ್ವಾನಗಳಿಗೆ ಗುಣಮಟ್ಟದ ಆಹಾರ ಹಾಗೂ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿಯೂ ಹೇಳುತ್ತಿದ್ದರು.’

‘ಜಾಹೀರಾತು ನೋಡಿ ತಮ್ಮನ್ನು ಸಂಪರ್ಕಿಸುತ್ತಿದ್ದ ಜನರಿಗೆ ನಕಲಿ ವೆಬ್‌ಸೈಟ್‌ಗಳ ಲಿಂಕ್ ಕಳುಹಿಸುತ್ತಿದ್ದರು. ನಂತರ, ಜನರಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆದು ನಾಪತ್ತೆಯಾಗುತ್ತಿದ್ದರು. ಈ ಬಗ್ಗೆ ಹಲವು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಆರೋಪಿಗಳು ಯಡಿಯೂರು ಎ.ಕೆ.ಕಾಲೊನಿಯ ಮನೆಯೊಂದರಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮನೆ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ವಿವರಿಸಿದರು.

’ಇದೊಂದು ರಾಷ್ಟ್ರೀಯ ಗ್ಯಾಂಗ್. ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧ ನಗರಗಳ ಜನರನ್ನೂ ಆರೋಪಿಗಳು ವಂಚಿಸಿರುವ ಮಾಹಿತಿ ಇದೆ. ವಂಚನೆ ಮಾಡಿ ಗಳಿಸಿರುವ ಹಣವನ್ನು ಆರೋಪಿಗಳು ಏನು ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಅವರು ವಿವರಿಸಿದರು.

ಆರೋಪಿಗಳು ಸೃಷ್ಟಿಸಿದ್ದ ನಕಲಿ ಜಾಲತಾಣಗಳು
* ಕ್ಲಿಪೆಟ್ಸ್ ಡಾಟ್ ಕಾಮ್
* ಫಾಸ್ಟ್‌ ಟ್ರ್ಯಾಕ್‌ ಲಾಜಿಸ್ಟಿಕ್‌ ಸರ್ವಿಸ್ ಡಾಟ್ ಕಾಮ್
* ಗ್ಲೋಬಲ್‌ ಕೆಮಿಕಲ್ಸ್‌ ಡಾಟ್ ಅಸ್
* ಗ್ಲೋಬಲ್ ಆನ್‌ಲೈನ್ ಫಾರ್ಮಸಿ ಡಾಟ್ ಕಾಮ್
* ಗ್ಲೋಬಲ್ ವರ್ಲ್ಡ್ ವೈಡ್ ಕೆಮಿಕಲ್ಸ್ ಡಾಟ್ ಕಾಮ್
* ಲೈಮಿ ಡೈರಿ ಆ್ಯಂಡ್ ಪೌಟ್ರಿ ಫಾರ್ಮ್ ಡಾಟ್ ಕಾಮ್
* ಪೌಲ್‌ ಫಾರ್ಮಸಿ ಡಾಟ್ ಇನ್
* ಸನ್‌ ರೈಸ್‌ ರೆಕಾರ್ಡ್ಸ್ ಡಾಟ್ ಕಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.