ADVERTISEMENT

ಹಾಸಿಗೆ, ವೆಂಟಿಲೇಟರ್‌ ಕೊರತೆ ನೆಪ: ರೋಗಿಗಳ ಪಡಿಪಾಟಲು

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ಸೋಂಕಿತರು * ಬೇರೆ ಕಾಯಿಲೆ ಇರುವವರಿಗೂ ಸಿಗುತ್ತಿಲ್ಲ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:47 IST
Last Updated 6 ಜುಲೈ 2020, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಾಸುಗಟ್ಟಲೇ ಕಾದರೂ ಬಾರದ ಆಂಬುಲೆನ್ಸ್‌, ಎಷ್ಟೇ ಕರೆ ಮಾಡಿದರೂ ಸಿಗದ ಸ್ಪಂದನೆ, ಸೋಂಕು ಇರದವರಿಗೂ ಸಿಗುತ್ತಿಲ್ಲ ಚಿಕಿತ್ಸೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳ ಅಲೆದಾಟ...

ನಗರದಲ್ಲಿ ಕೊರೊನಾ ಸೋಂಕಿತರ ಪಡಿಪಾಟಲು ಸೋಮವಾರವೂ ಮುಂದುವರಿಯಿತು. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಅದಕ್ಕೆ ತಕ್ಕ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಳ್ಳುತ್ತಿಲ್ಲ ಎಂದು ಸೋಂಕಿತರು ದೂರಿದರು.

15 ಆಸ್ಪತ್ರೆಗಳಿಗೆ ಅಲೆದರೂ ಉಳಿಯಲಿಲ್ಲ ಪ್ರಾಣ

ADVERTISEMENT

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ವೃದ್ಧರೊಬ್ಬರು ಎರಡು ದಿನಗಳಿಂದ 15 ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದರೂ, ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯ ವೃದ್ಧರೊಬ್ಬರು ತಮ್ಮ 64 ವರ್ಷದ ಪತ್ನಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಮಧುಮೇಹವೂ ಇತ್ತು. ರಕ್ತಪರೀಕ್ಷೆ ನಡೆಸಿದಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇರುವುದು ಗೊತ್ತಾಗಿದೆ.

‘ಸಕ್ಕರೆ ಪ್ರಮಾಣ ಜಾಸ್ತಿಯಾಗಿದೆ. ನಮ್ಮಲ್ಲಿ ವೆಂಟಿಲೇಟರ್‌ ಇಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಅಲ್ಲಿಂದ, ರಾಜೀವ್‌ಗಾಂಧಿ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ವಿಕ್ಟೋರಿಯಾ, ಪ್ರಶಾಂತ್‌, ಕೆ.ಸಿ. ಜನರಲ್, ಬೌರಿಂಗ್, ಫೊರ್ಟಿಸ್‌, ರಾಜರಾಜೇಶ್ವರಿ ನಗರ ವೈದ್ಯಕೀಯ ಕಾಲೇಜು, ಬಿಜಿಎಸ್, ಅಪೋಲೊ, ಸಾಯಿರಾಂ, ಕೆಂಗೇರಿಯಲ್ಲಿರುವ ನರ್ಸಿಂಗ್‌ ಹೋಂ ಸೇರಿದಂತೆ 15 ಆಸ್ಪತ್ರೆಗಳಿಗೆ ತಿರುಗಾಡಿದೆ. ಕೆಲವರು ಹಾಸಿಗೆ ಭರ್ತಿಯಾಗಿದೆ ಎಂದರೆ, ಹಲವರು ವೆಂಟಿಲೇಟರ್‌ ಇಲ್ಲ, ತೀವ್ರ ನಿಗಾ ಘಟಕದ ವ್ಯವಸ್ಥೆ ಇಲ್ಲ ಎಂದು ಸಬೂಬು ಹೇಳಿದರು. ಹಲವು ಆಸ್ಪತ್ರೆಗಳಲ್ಲಿ ಕೊರೊನಾ ಪಾಸಿಟಿವ್‌ ವರದಿ ತೆಗೆದುಕೊಂಡು ಬನ್ನಿ ಎಂದರು. ಎರಡು ದಿನ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದೆ. ಸೋಮವಾರ ಬೆಳಿಗ್ಗೆ 9.30ರ ವೇಳೆಗೆ ಪತ್ನಿ ಕೊನೆಯುಸಿರೆಳೆದರು’ ಎಂದು ಪತಿ ಕಣ್ಣೀರಿಟ್ಟರು.

ಸಚಿವರೇ ಹೇಳಿದರೂ ಆಸ್ಪತ್ರೆಗಳು ಸ್ಪಂದಿಸಲಿಲ್ಲ

‘ನನ್ನ ತಂದೆ (60 ವರ್ಷ) ವಾರದಲ್ಲಿ ಎರಡು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು. ಅಪೊಲೊ ಆಸ್ಪತ್ರೆಗೆ ಶುಕ್ರವಾರ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಹೋಗಿದ್ದರು. ಶನಿವಾರ ರಾತ್ರಿ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ, ನಿಮ್ಮ ತಂದೆಯವರಿಗೆ ಕೊರೊನಾ ಪಾಸಿಟಿವ್‌ ಇದೆ. ಸದ್ಯ, ನಮ್ಮಲ್ಲಿ ಹಾಸಿಗೆ ಖಾಲಿ ಇಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕಳಿಸಿದರು’ ಎಂದು ಪುತ್ರ ಪುನೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾನುವಾರ ಇಡೀ ದಿನ ಓಡಾಡಿದರೂ ಯಾವ ಆಸ್ಪತ್ರೆಯವರೂ ದಾಖಲಿಸಿಕೊಳ್ಳಲಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದಾಗ, ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಯ ವೈದ್ಯರ ಬಳಿ ಮಾತನಾಡಿ, ಅಲ್ಲಿಗೆ ದಾಖಲಿಸಲು ಹೇಳಿದರು. ಆದರೆ, ಅಲ್ಲಿಗೆ ಹೋದರೆ ವೈದ್ಯರು ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದರು. ತಂದೆ ಹೊರಗಡೆಯೇ ಕಾಯಬೇಕಾಯಿತು. ಸಚಿವ ವಿ. ಸೋಮಣ್ಣ ಅವರೇ ಅಧಿಕಾರಿಗಳಿಗೆ ಕರೆ ಮಾಡಿ ಆಸ್ಪತ್ರೆ ವ್ಯವಸ್ಥೆ ಮಾಡಿ ಎಂದರೂ ಯಾರೂ ಸ್ಪಂದಿಸಲಿಲ್ಲ. ಎರಡು ದಿನ ಓಡಾಡಿದ ನಂತರ, ಸೋಮವಾರ ಸಂಜೆ ಕಿಮ್ಸ್‌ ಆಸ್ಪತ್ರೆಯಲ್ಲಿ ತಂದೆಯವರನ್ನು ದಾಖಲಿಸಲಾಯಿತು’ ಎಂದು ಅವರು ಹೇಳಿದರು.

ಬಾರದ ಆಂಬುಲೆನ್ಸ್‌: ಯುವತಿಯ ಪರದಾಟ

ಉಸಿರಾಟದಿಂದ ಬಳಲುತ್ತಿದ್ದ ಯುವತಿಯೊಬ್ಬರು ಆಂಬುಲೆನ್ಸ್‌ಗೆ ಕರೆ ಮಾಡಿದರೆ ಯಾರೂ ಸ್ಪಂದಿಸಿಲ್ಲ. ವೈಟ್‌ಫೀಲ್ಡ್‌ನ ವಿಶಾಲ್‌ ಮಾರ್ಟ್‌ ಬಳಿ ಭಾನುವಾರ ಸಂಜೆ ತಾಸುಗಟ್ಟಲೇ ಕಾದರೂ ಆಂಬುಲೆನ್ಸ್‌ ಬಂದಿಲ್ಲ. ನಂತರ, ಸ್ಥಳೀಯರೇ ಆಟೊ ಹತ್ತಿಸಿ, ಅವರನ್ನು ಆಸ್ಪತ್ರೆಗೆ ಕಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.