ADVERTISEMENT

ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ ಸಾವು

ಹತ್ತೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಅವಳಿ ಮಕ್ಕಳು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 16:06 IST
Last Updated 2 ಆಗಸ್ಟ್ 2020, 16:06 IST

ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಬಾಣಂತಿಯೊಬ್ಬರ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಮಹಿಳೆಯ ಹತ್ತು ದಿನಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಸುಂಕದಕಟ್ಟೆ ನಿವಾಸಿಯಾಗಿದ್ದ 21 ವರ್ಷದ ಮಹಿಳೆ, ಸುಂಕದಕಟ್ಟೆಯಲ್ಲಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಅದೇ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದರು. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದರಿಂದ ಮನೆಗೆ ತೆರಳಿದ್ದರು.

ಮನೆಗೆ ತೆರಳಿದ ನಂತರ, ಮಹಿಳೆಗೆ ಉಸಿರಾಟದ ಸಮಸ್ಯೆ ಜಾಸ್ತಿಯಾಗಿದೆ. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ನಾಲ್ಕೈದು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಬಾಣಂತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿಲ್ಲ.

ADVERTISEMENT

ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಹೇಳಿ ಕಳಿಸಿದರು. ಕೊನೆಗೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಸಾವಿಗೀಡಾದರು. ಈ ಸಾವಿಗೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮಹಿಳೆಯ ಕುಟುಂಬದವರು ದೂರಿದ್ದಾರೆ.

ಮಗು ಆಸ್ಪತ್ರೆಯಲ್ಲಿ, ತಾಯಿ ಮನೆಯಲ್ಲಿ:

ಕುಟುಂಬದಲ್ಲಿ ಗಂಡ ಮತ್ತು ಮಗುವಿಗೆ ಸೋಂಕು ತಗುಲಿದ್ದು, ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತಾಯಿ ಮನೆಯಲ್ಲಿದ್ದಾರೆ. ಒಂದೂವರೆ ವರ್ಷದ ಮಗುವನ್ನು ಬಿಟ್ಟಿರಲಾರದೆ ತಾಯಿ ಕಣ್ಣೀರಿಡುತ್ತಿದ್ದಾರೆ.

ನಗರದ ವೆಂಕಟೇಶ್ವರನಗರದಲ್ಲಿ ವಾಸವಾಗಿರುವ ಕುಟುಂಬದಲ್ಲಿ ತಾಯಿಯನ್ನು ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಲಾಗಿದೆ. ಮಗು ಮತ್ತು ಪತಿಯನ್ನು ಬಿಬಿಎಂಪಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಮಗುವಿನ ಜೊತೆಗೆ ಇರಲು ತಾಯಿ ಅವಕಾಶ ಕೇಳಿದ್ದಾರೆ. ಆದರೆ, ಸಿಬ್ಬಂದಿ ಇದಕ್ಕೆ ಅವಕಾಶ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.