ಬೆಂಗಳೂರು: ನಗರದಲ್ಲಿ 3,082 ಕೋವಿಡ್ ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.
ವಿದೇಶದಿಂದ ನಗರಕ್ಕೆ ಮರಳಿದ್ದ 40 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮಾ.8ರಂದು ಕೋವಿಡ್ ಪೀಡಿತರಾಗಿದ್ದರು. ಇದು ನಗರದಲ್ಲಿ ವರದಿಯಾದ ಪ್ರಥಮ ಕೋವಿಡ್ ಪ್ರಕರಣವಾಗಿತ್ತು. ಸರ್ಕಾರವು ಲಾಕ್ ಡೌನ್ ಘೋಷಿಸುವ ವೇಳೆಗೆ (ಮಾ.24) ನಗರದಲ್ಲಿ 32 ಪ್ರಕರಣಗಳು ವರದಿಯಾಗಿದ್ದವು. ಸೋಂಕು ಶಂಕಿತರ ಪತ್ತೆ, ಕ್ವಾರಂಟೈನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದ ಮೊದಲ ಹಂತದ ಲಾಕ್ ಡೌನ್ ಅಂತ್ಯವಾಗುವ ವೇಳೆಗೆ 71 ಪ್ರಕರಣಗಳಷ್ಟೇ ಪತ್ತೆಯಾದ್ದವು.
ನಾಲ್ಕನೇ ಹಂತದ ಲಾಕ್ ಡೌನ್ ಮುಕ್ತಾಯವಾಗುವ ವೇಳೆ ನಗರದಲ್ಲಿ 4,555 ಮಂದಿ ಸೋಂಕಿತರಾಗಿದ್ದರು. ಲಾಕ್ ಡೌನ್ ಸಡಿಲಿಸಿ, ನಿರ್ಬಂಧಗಳನ್ನು ತೆಗೆದ ಬಳಿಕ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿತು. ಮೊದಲ ಪ್ರಕರಣ ವರದಿಯಾಗಿ ಐದೂವರೆ ತಿಂಗಳು ಕಳೆದ ಬಳಿಕ (ಆ.21) ಸೋಂಕಿತ ಸಂಖ್ಯೆ ಒಂದು ಲಕ್ಷದ ಗಡಿ ದಾಟಿತ್ತು. ಆದರೆ, ನಂತರದ ಒಂದು ಲಕ್ಷ ಪ್ರಕರಣಗಳು ಕೇವಲ ಒಂದು ತಿಂಗಳ ಅವಧಿಯಲ್ಲಿ ವರದಿಯಾಗಿವೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 13.85 ರಷ್ಟಿದೆ.
26 ಮಂದಿ ಸಾವು: ಸೋಂಕಿತರಲ್ಲಿ ಮತ್ತೆ 26 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಶೇ 1.36ಕ್ಕೆ ಇಳಿಕೆಯಾಗಿದೆ. ಈ ಪ್ರಮಾಣ ಆಗಸ್ಟ್ ತಿಂಗಳಲ್ಲಿ ಶೇ 1.62ರಷ್ಟಿತ್ತು. ಕೊರೊನಾ ಸೋಂಕಿತರಲ್ಲಿ ಮತ್ತೆ 4,145 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 1.58 ಲಕ್ಷ ದಾಟಿದೆ.
39 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 259 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈವರೆಗೆ ನಗರದಲ್ಲಿ 14.50 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.
**
ಪಿಎಂಎಸ್‌ಎಸ್‌ವೈ: ಇಂದಿನಿಂದ ಕೋವಿಡೇತರರಿಗೆ ಚಿಕಿತ್ಸೆ
ಕೋವಿಡ್ ಕಾರಣ ಕೆಲ ತಿಂಗಳಿನಿಂದ ಕೋವಿಡೇತರ ಕಾಯಿಲೆಗಳಿಗೆ ವೈದ್ಯಕೀಯ ಸೇವೆ ಸ್ಥಗಿತ ಮಾಡಿದ್ದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯು ಬುಧವಾರದಿಂದ ಪುನಃ ಎಲ್ಲ ರೀತಿಯ ಚಿಕಿತ್ಸೆಗಳನ್ನು ಆರಂಭಿಸಲಿದೆ.
ವಿಕ್ಟೋರಿಯಾ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟ ಬಳಿಕ ಪಿಎಂಎಸ್‌ಎಸ್‌ವೈನಲ್ಲಿ ಕೋವಿಡೇತರ ವೈದ್ಯಕೀಯ ಸೇವೆಗಳನ್ನು ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಟ್ರಾಮಾ ಸೆಂಟರ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಹಳೆ ಕಟ್ಟಡವನ್ನು ಮಾತ್ರ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ, ಉಳಿದ ಬ್ಲಾಕ್‌ಗಳನ್ನು ವೈದ್ಯರು ಹಾಗೂ ಶುಶ್ರೂಷಕರ ಕ್ವಾರಂಟೈನ್‌ಗೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಈಗ ವೈದ್ಯರಿಗೆ ಕ್ವಾರಂಟೈನ್ ಆಗಲು ಹೋಟೆಲ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಿ, ಪಿಎಂಎಸ್‌ಎಸ್‌ವೈನಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೇವೆಗಳನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡವನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಲಾಗಿದ್ದು, ಹೃದ್ರೋಗ, ನರರೋಗ, ಯಕೃತ್ತು ಸಮಸ್ಯೆ, ಮಕ್ಕಳ ಚಿಕಿತ್ಸೆ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಅಲ್ಲಿ ಸೇವೆ ದೊರೆಯಲಿದೆ.
**
ಮೂರು ಬಾರಿ ಹೃದಯಾಘಾತ: ಕೋವಿಡ್ ವಾಸಿ
ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ 51 ವರ್ಷದ ಕೊರೊನಾ ಸೋಂಕಿತ ಮಹಿಳೆಗೆ ಎರಡು ಗಂಟೆಗಳಲ್ಲಿ ಮೂರು ಬಾರಿ ಹೃದಯಾಘಾತವಾಗಿದೆ. ಇಷ್ಟಾಗಿಯೂ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ವೇಳೆ ಸೋಂಕಿತ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು, ಅಧಿಕ ಬೊಜ್ಜು, ಆಸ್ತಮಾ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಐಸಿಯುವಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಕೃತಕ ಉಸಿರಾಟ, ಜೀವರಕ್ಷಕ ಸಾಧನಗಳ ಸಹಾಯದಿಂದ ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.