ADVERTISEMENT

ರಾಜಧಾನಿಯ ಅಂಚಿನಲ್ಲೇ ‘ಆರೋಗ್ಯ’ ಅಯೋಮಯ

ಗುರು ಪಿ.ಎಸ್‌
Published 3 ಜೂನ್ 2021, 20:39 IST
Last Updated 3 ಜೂನ್ 2021, 20:39 IST
ನೆಲಮಂಗಲದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೋವಿಡ್ ಲಸಿಕೆಗಾಗಿ ಅಂತರವಿಲ್ಲದೆ ನೂರಾರು ಜನ ನಿಂತಿರುವ ದೃಶ್ಯ -             ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ನೆಲಮಂಗಲದ ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೋವಿಡ್ ಲಸಿಕೆಗಾಗಿ ಅಂತರವಿಲ್ಲದೆ ನೂರಾರು ಜನ ನಿಂತಿರುವ ದೃಶ್ಯ -  ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಕೊರೊನಾ ವೈರಾಣು ರೂಪಾಂತರಗೊಂಡಂತೆ ಅದು ಮುಂದಿಡುತ್ತಿರುವ ಸವಾಲುಗಳು ಬದಲಾಗುತ್ತಿವೆ. ಈ ಸವಾಲುಗಳಿಗೆ ತಕ್ಕಂತೆ ಸೌಲಭ್ಯಗಳೂ ರೂಪಾಂತರಗೊಳ್ಳದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಜಧಾನಿಯ ಅಕ್ಕ–ಪಕ್ಕದ ಗ್ರಾಮಗಳಲ್ಲಿ ಓಡಾಡಿದಾಗ ಕಂಡ ವಾಸ್ತವ.

ಕೊರೊನಾ ಪೂರ್ವದ ವರ್ಷಗಳಲ್ಲಿ ‘ಆರೋಗ್ಯ ಪ್ರವಾಸೋದ್ಯಮ’ ಎಂಬ ಹೊಸ ಪರಿಕಲ್ಪನೆ ಶುರುವಾಗಿತ್ತು. ಜಗತ್ತಿನಲ್ಲೇ ಈ ಉದ್ಯಮಕ್ಕೆ ಬೆಂಗಳೂರು ರಾಜಧಾನಿ ಎಂಬ ಹಣೆಪಟ್ಟಿಯೂ ಬಿದ್ದಿತು. ರಾಜಧಾನಿಯ ಈ ನಂಟು ಅತ್ತ ಹಳ್ಳಿಯೂ ಅಲ್ಲದ, ಇತ್ತ ಪೂರ್ಣ ಪೇಟೆಯೂ ಅಲ್ಲದ ಗ್ರಾಮೀಣ ಪ್ರದೇಶಕ್ಕೆ ವರವೂ–ಶಾಪವೂ ಆಗಿ ಪರಿಣಮಿಸಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ದೇವನಹಳ್ಳಿ, ಆನೇಕಲ್‌ನ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ–ಸೇವೆ ಸುಧಾರಿಸಿದ್ದರೆ, ಹಳ್ಳಿಗಾಡಿಗೆ ಸೌಲಭ್ಯ ತಲುಪಿಲ್ಲ. ಆದರೆ ಸೋಂಕೇ ಹೆಚ್ಚಿನ ಪ್ರಮಾಣದಲ್ಲಿ ಪಸರಿಸಿದೆ.

ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನ್ನುವಂತೆಯೇ ಕಾಣುತ್ತದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ‘ಮಾಧ್ಯಮ’ ಎದುರು ಯಾವುದೇ ಸಮಸ್ಯೆ ಇಲ್ಲ ಎಂದೇ ಹೇಳುವ ರೋಗಿಗಳ ಸಂಬಂಧಿಕರು, ನಮ್ಮ ಗುರುತು ಹೇಳಿಕೊಳ್ಳದೇ ವಿಚಾರಿಸಿದಾಗ, ‘ರಾತ್ರಿಯಾದರೆ ಇಲ್ಲಿ ನರಕ ಸೃಷ್ಟಿಯಾಗುತ್ತೆ. ಕೋವಿಡ್ ವಾರ್ಡ್‌ಗಳಲ್ಲಿ, ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲ. ವೈದ್ಯಕೀಯ ಸಿಬ್ಬಂದಿಯೂ ಇರುವುದಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ದೇವರೇ ಕಾಪಾಡಬೇಕು’ ಎಂದು ಆತಂಕದಿಂದಲೇ ಮಾಹಿತಿ ಬಿಡಿಸಿಡುತ್ತಾರೆ.

ADVERTISEMENT

ಐಸಿಯು ಬೇಕು: ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೈಕೆ ಕೇಂದ್ರಗಳಲ್ಲಿ ಸಾಮಾನ್ಯ ಹಾಸಿಗೆಗಳು ಸಾಕಷ್ಟಿವೆ. ಹಳ್ಳಿಗಳಲ್ಲಿ ಅನೇಕ ಜನ ಮನೆ ಆರೈಕೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಹೊಸಕೋಟೆ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿಯೇ ಸಾವಿರ ಲೀಟರ್ ಸಾಮರ್ಥ್ಯದ ದ್ರವ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. 75 ಜಂಬೋ ಸಿಲಿಂಡರ್‌ಗಳನ್ನೂ ಕಾಯ್ದಿರಿಸಲಾಗಿದೆ. ಕೋವಿಡ್ ಪರೀಕ್ಷೆ ಮಾಡಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಲ್ಲಿರುವ ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳ ಸಂಖ್ಯೆ ಕೇವಲ 3.

ಜಿಲ್ಲೆಯಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ ಮೂರರಿಂದ ನಾಲ್ವರುಕೋವಿಡ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾಗಿದೆ.

ವೆಂಟಿಲೇಟರ್‌ ಸೌಲಭ್ಯ ಒದಗಿಸಲು ಈ ಭಾಗದ ಶಾಸಕರು, ಸಂಸದರು ಸಿದ್ಧರಿದ್ದರೂ, ಅದನ್ನು ನಿರ್ವಹಿಸಲು ಬೇಕಾದ ಮಾನವ ಸಂಪನ್ಮೂಲದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿ, ತಜ್ಞ ವೈದ್ಯರ ಅಗತ್ಯವಿದೆ.

ಲಸಿಕೆ ಧಾವಂತ: ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿಬ್ಬಂದಿ ಪ್ರಚಾರ ನಡೆಸಬೇಕಾದ, ಒತ್ತಾಯಿಸಬೇಕಾದ ಪರಿಸ್ಥಿತಿ ಇದ್ದರೆ, ತಾಲ್ಲೂಕು ಕೇಂದ್ರಗಳಲ್ಲಿ ಜನರು ಲಸಿಕೆಗಾಗಿ ಮುಗಿಬೀಳುತ್ತಿದ್ದಾರೆ. ದಿನವಿಡೀ ಕಾದರೂ ಲಸಿಕೆ ಸಿಗುತ್ತಿಲ್ಲ.

‘ಕೊವ್ಯಾಕ್ಸಿನ್‌’ ಎರಡನೇ ಡೋಸ್‌ ಪಡೆಯುವವರ ಪಟ್ಟಿಯಲ್ಲಿ ನಮ್ಮ ಹೆಸರಿದೆಯೇ ಎಂದು ಮಕ್ಕಳು ಪರೀಕ್ಷೆ ಫಲಿತಾಂಶ ನೋಡುವ ರೀತಿಯಲ್ಲಿ ಪಿಎಚ್‌ಸಿಗಳ ಎದುರು ಹಿರಿಯ ನಾಗರಿಕರು ತಮ್ಮ ಹೆಸರನ್ನು ಹುಡುಕುತ್ತಿದ್ದಾರೆ. ಲಸಿಕೆ ಸಿಗದವರು ಸರ್ಕಾರಿ ಆಸ್ಪತ್ರೆ, ಪಿಎಚ್‌ಸಿಗಳ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಸಿದ್ಧತೆಯೇ ಇಲ್ಲ!

ಗ್ರಾಮೀಣ ಭಾಗದ ಅನೇಕರಲ್ಲಿ ಕಪ್ಪು ಶಿಲೀಂಧ್ರ ರೋಗದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಂಡಿರುವ ಹಲವರಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತಿದ್ದು, ಇದು ಯಾವ ರೋಗ ಎಂಬ ತಿಳಿವಳಿಕೆಯೂ ಹೆಚ್ಚಿನವರಿಗಿಲ್ಲ.

ಇದರ ಚಿಕಿತ್ಸೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೇ ಬರಬೇಕಾಗಿದೆ. ಆದರೆ, ಇಲ್ಲಿಯೂ ಈ ಚಿಕಿತ್ಸೆಗೆ ಬೇಕಾದ ಲೈಪೊಸೋಮಲ್‌ ಅ್ಯಂಫೊಟೆರಿಸಿನ್‌ ಬಿ ಚುಚ್ಚುಮದ್ದು ಕೊರತೆ ಇದೆ. ರಾಜಧಾನಿಯೊಳಗೆ ಸೇರುತ್ತಿರುವ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಇದಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ.

‘ಹೆಚ್ಚಿನ ಪ್ರಮಾಣದಲ್ಲಿ ಇಂಜೆಕ್ಷನ್‌ ಬೇಕು. ಈ ಚಿಕಿತ್ಸೆ ನೀಡಲು ಕಣ್ಣು, ಮೂಗು ಮತ್ತು ಗಂಟಲು (ಇಎನ್‌ಟಿ) ತಜ್ಞರನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ವೈದ್ಯರೊಬ್ಬರು ಹೇಳಿದರು.

ಸೂಕ್ತ ಆಹಾರವಿಲ್ಲದೆ ಚೇತರಿಕೆ ನಿಧಾನ

‘32 ವರ್ಷದ ಮಗ ಮುರಳಿ ಗಟ್ಟಿಮುಟ್ಟಾಗಿದ್ದ. ಸ್ವಲ್ಪ ಜ್ವರ ಬಂದಿತ್ತು. ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಬೈಕ್‌ನಲ್ಲಿಯೇ ಕರೆದುಕೊಂಡು ಹೋಗಿದ್ದೆವು. ಕೋವಿಡ್ ಎಂದು ದಾಖಲಿಸಿಕೊಂಡರು. ಒಂದೇ ವಾರದಲ್ಲಿ ಅವನ ಶವ ಮನೆಗೆ ಬಂತು. ಊಟ, ನೀರು ಏನೂ ಕೊಡುತ್ತಿರಲಿಲ್ಲ. ಊಟ, ಊಟ ಎಂದು ಕೇಳುತ್ತಲೇ ಜೀವ ಬಿಟ್ಟ’ ಎಂದು ಕಣ್ಣೀರಾದರು ಹೊಸಕೋಟೆ ತಾಲ್ಲೂಕಿನ ದೊಡ್ಡದುನ್ನಸಂದ್ರ ನಿವಾಸಿಗಳಾದ ಕೃಷ್ಣಪ್ಪ–ಶಾಂತಮ್ಮ ದಂಪತಿ.

ಇದು ಈ ದಂಪತಿಯ ಕೊರಗು ಮಾತ್ರವಲ್ಲ. ಕೋವಿಡ್‌ನಿಂದ ಸಾವಿಗೀಡಾಗಿರುವ ಸಂಬಂಧಿಕರ, ಗುಣಮುಖವಾದವರ ಸಾಮಾನ್ಯ ದೂರು. ‘ಕೋವಿಡ್‌ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಊಟದ ವ್ಯವಸ್ಥೆ ಆಗುತ್ತಿಲ್ಲ. ರಾತ್ರಿ ವೇಳೆ ಹಸಿವಿನಿಂದ ಕೂಗಿದರೂ ಯಾರೂ ಕೇಳಿಸಿಕೊಳ್ಳುವುದಿಲ್ಲ’ ಎಂದು ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿಯೊಬ್ಬರು ದೂರಿದರು. ‌

ದೇವನಹಳ್ಳಿಯ ಕೋವಿಡ್ ಆಸ್ಪತ್ರೆ ಬಿಟ್ಟು ಉಳಿದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದು ಕಾಣಲಿಲ್ಲ.

***

ಕೋವಿಡ್‌ ಪರೀಕ್ಷೆ, ಲಸಿಕೆ ವಿತರಣೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದರೆ ಪ್ರತಿ ಗ್ರಾಮಗಳಿಗೂ ತೆರಳಿ ಪರೀಕ್ಷಾ ಕಾರ್ಯ ಕೈಗೊಳ್ಳಬಹುದಾಗಿದೆ

-ಅಂಜನಮ್ಮ, ಹಿರಿಯ ಆರೋಗ್ಯ ಸಹಾಯಕಿ , ದಾಬಸ್‌ಪೇಟೆ ನಿವಾಸಿ

***

ದೊಡ್ಡಬಳ್ಳಾಪುರದಲ್ಲಿ ಐಸಿಯು ಹಾಸಿಗೆಗಳು ಕಡಿಮೆ ಇವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ

-ಬಿ.ಪಿ. ಆಂಜನೇಯ, ದೊಡ್ಡಬಳ್ಳಾಪುರ ನಿವಾಸಿ

***

ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರು ತಪ್ಪು ದೂರವಾಣಿ ಸಂಖ್ಯೆ, ವಿಳಾಸ ನೀಡುತ್ತಿದ್ದಾರೆ. ಇಂಥವರ ನಿರ್ಲಕ್ಷ್ಯ–ಭಯದಿಂದ ಗ್ರಾಮಗಳಲ್ಲಿ ಕೋವಿಡ್‌ ಹೆಚ್ಚುತ್ತಿದೆ

-ಕೆ.ಎಸ್. ಹೊನ್ನಪ್ಪ, ಕರಿಮಣ್ಣೆ ದಾಬಸ್‌ಪೇಟೆ

***

ಪತಿಯ ಕೋವಿಡ್‌ ಪರೀಕ್ಷೆಯ ಫಲಿತಾಂಶ ಏಳು ದಿನಗಳ ನಂತರ ಬಂತು. ಅಷ್ಟರಲ್ಲಾಗಲೇ ಅವರ ಸ್ಥಿತಿ ಗಂಭೀರವಾಗಿ ತೀರಿಕೊಂಡರು.

-ಅಭಿಲಾಷ, ಬಾಣಾರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.