ADVERTISEMENT

ಪರ್ಯಾಯ ಉದ್ಯೋಗ: ಟ್ಯಾಕ್ಸಿ ಚಾಲಕನಿಂದ ಮಾಸ್ಕ್‌ ಮಾರಾಟ

ಪಾಲನೆಯಾಗದ ನಿಯಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:35 IST
Last Updated 28 ಮಾರ್ಚ್ 2020, 20:35 IST
ಮುಖಗವಸು ಮಾರಿದ ಸೈಯದ್‌  –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ಮುಖಗವಸು ಮಾರಿದ ಸೈಯದ್‌  –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆ ಮುಖ ಗವಸು, ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ನಿಗದಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನೊಂದೆಡೆ, ಈ ಉತ್ಪನ್ನಗಳು ಎಷ್ಟೋ ಜನರಿಗೆ ಪರ್ಯಾಯ ಉದ್ಯೋಗವನ್ನೂ ದೊರಕಿಸಿಕೊಟ್ಟಿವೆ. ಆದರೆ, ನಿಯಮ ಮಾತ್ರ ಪಾಲನೆಯಾಗುತ್ತಿಲ್ಲ.

ಲಾಕ್‌ಡೌನ್‌ ಪರಿಣಾಮದಿಂದಾಗಿ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಟ್ಯಾಕ್ಸಿ ಓಡಿಸುವವರು, ಆಟೊ ಚಾಲಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಇವರಲ್ಲಿ ಕೆಲವರು ಮುಖಗವಸು ಮಾರಾಟ ಮಾಡುತ್ತಾ ಬದುಕು ದೂಡುತ್ತಿದ್ದಾರೆ.

‘ನಾನು ಬಾಡಿಗೆ ಟ್ಯಾಕ್ಸಿ ಓಡಿಸುತ್ತಿದ್ದೆ. ನಮ್ಮ ಕ್ಯಾಬ್‌ನ ಮಾಲೀಕರು ಬೇರೆ ರಾಜ್ಯಕ್ಕೆ ಹೋಗಿದ್ದು, ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದಾರೆ. ದುಡಿಮೆಯೂ ಇರಲಿಲ್ಲ, ಸಂಬಳವೂ ಸಿಗುತ್ತಿರಲಿಲ್ಲ. ಈಗ ಮುಖಗವಸು ಮಾರಾಟ ಮಾಡುತ್ತಿದ್ದೇನೆ’ ಎಂದು ಸೈಯದ್‌ ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

ಮೈಸೂರು ರಸ್ತೆಯಲ್ಲಿನ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಮುಖಗವಸು ಮಾರುತ್ತಿರುವ ಸೈಯದ್, ‘ಮಕ್ಕಳಿಗೆ ಆರೋಗ್ಯ ಸಮಸ್ಯೆಯಾದರೂ ಕೈಯಲ್ಲಿ ಹಣವಿರಲಿಲ್ಲ. ನಿತ್ಯದ ಜೀವನ ನಡೆಸುವುದೂ ಕಷ್ಟವಾಗಿತ್ತು. ಹೊರಗಡೆಯಿಂದ ಕಾಟನ್‌ ಮುಖಗವಸು ಖರೀದಿಸಿ ಮಾರಾಟ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಸಗಟು ದರದಲ್ಲಿ ಮುಖಗವಸು ಖರೀದಿಸುತ್ತಿರುವ ಸೈಯದ್, ₹3ರಿಂದ ₹4 ಲಾಭ ಇಟ್ಟುಕೊಂಡು, ₹30ಗೆ ಒಂದು ಮುಖಗವಸು ಮಾರಾಟ ಮಾಡುತ್ತಿದ್ದಾರೆ. ಈವರೆಗೆ 400 ಮುಖಗವಸು ಮಾರಾಟ ಮಾಡಿರುವುದಾಗಿ ಅವರು ಹೇಳುತ್ತಾರೆ.

ಪಾಲನೆಯಾಗದ ನಿಯಮ: ರಸ್ತೆ ಬದಿಯಲ್ಲಿ ಮುಖಗವಸುಗಳನ್ನು ಮಾರಾಟ ಮಾಡುವುದರಿಂದ ಅವುಗಳಿಗೆ ದೂಳು ಮತ್ತು ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಸರ್ಜಿಕಲ್‌ ಮುಖಗವಸುಗಳನ್ನು ₹5ಕ್ಕೆ ಮಾರಾಟ ಮಾಡಬೇಕು. ಆದರೆ, ₹30ರಿಂದ ₹50ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.