ಬೆಂಗಳೂರು: ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಸೋಂಕಿನಿಂದ ಒಂದಷ್ಟು ಮಂದಿ ಸಾವನ್ನಪ್ಪಿರಬಹುದು. ಆದರೆ, ಆ ಸೋಂಕು ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದವರ ಸಂಖ್ಯೆಯೇನೂ ಕಡಿಮೆ ಅಲ್ಲ.
ತಾವು ಕಂಡ ಇಂಥದ್ದೊಂದು ಸಕಾರಾತ್ಮಕ ಪ್ರಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ.ರಜನಿ ಪಿ. ಅವರು ‘ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡಿದ್ದಾರೆ. ಆ ಕಥೆಯನ್ನು ಅವರ ಮಾತಲ್ಲೇ ಕೇಳೋಣ.
ಕೆಲಸದ ಮೇಲೆ ವಿದೇಶಕ್ಕೆ ತೆರಳಿದ್ದ ಸುಮಾರು 50–55 ವರ್ಷದ ಸಾಫ್ಟವೇರ್ ಉದ್ಯೋಗಿಯೊಬ್ಬರು
ಬೆಂಗಳೂರಿನ ತಮ್ಮ ಮನೆಗೆ ವಾಪಸಾದರು. ಬಂದ ಆರಂಭದಲ್ಲಿ ಅವರಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೂ, ಮುಂಜಾಗ್ರತೆಯಾಗಿ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿದ್ದರು. ಎರಡು ದಿನಗಳ ಬಳಿಕ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಸೋಂಕು ತಗುಲಿರಬಹುದು ಎಂಬ ಭಯ, ಆತಂಕ ಒಳಗೊಳಗೆ ಕಾಡತೊಡಗಿತ್ತು. ಆದರೆ, ಮನೆಯಲ್ಲಿ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹೇಳಿದರೆ ಎಲ್ಲರೂ ಹೆದರಿಕೊಂಡಾರು ಎಂಬ ಭಯ ಅವರನ್ನು ಕಾಡುತಿತ್ತು.
ಜ್ವರ, ಸುಸ್ತು ಹೆಚ್ಚಾದಾಗ ಆತಂಕದಿಂದ ಫಸ್ಟ್ ರೆಫೆರಲ್ ಹಾಸ್ಪಿಟಲ್‌ಗೆ ಬಂದು ತಪಾಸಣೆಗೆ ಒಳಗಾದರು. ಅವರ ಆತಂಕ ನಿಜವಾಗಿತ್ತು. ವೈದ್ಯಕೀಯ ಫಲಿತಾಂಶಗಳು ಇದನ್ನು ದೃಢಪಡಿಸಿದ್ದವು. ಗಂಟಲು ದ್ರವದ ಮೊದಲ ಪರೀಕ್ಷೆಯಲ್ಲಿ ಕೋವಿಡ್–19 ಸೋಂಕು ತಗುಲಿರುವುದು ಖಚಿತವಾಯಿತು. ಅದಾದ ನಂತರ 24 ಗಂಟೆ ಅವಧಿಯಲ್ಲಿ ಸೋಂಕು ದೃಢಪಡಿಸಿಕೊಳ್ಳಲು ನಡೆಸಿದ ಎರಡನೇ ಕನ್ಫರ್ಮೇಟಿವ್ ಟೆಸ್ಟ್ ಫಲಿತಾಂಶ ಕೂಡ ಪಾಸಿಟಿವ್ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಲಾಯಿತು. ವಿದೇಶದಿಂದ ಬಂದಿದ್ದ ಅವರಿಗೆ ಜೆಟ್‌ಲ್ಯಾಗ್ (ಪ್ರಯಾಣ ಆಯಾಸ) ಕಾಡುತ್ತಿತ್ತು. ಅದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
‘ಏನು ಮಾಡಿದರೂ ರಾತ್ರಿ ನಿದ್ದೆ ಬರ್ತಾ ಇಲ್ಲ. ಎರಡು ದಿನವಾದರೂ ಜ್ವರ ಕಡಿಮೆ ಆಗ್ತಾ ಇಲ್ಲ. ನನ್ನಿಂದ ನನ್ನ ಮಕ್ಕಳಿಗೆ, ಮನೆಯವರಿಗೆ ಈ ಕಾಯಿಲೆ ಹರಡಿ ಬಿಟ್ಟಿದೆಯಾ ಎಂಬ ಭಯ ಕಾಡ್ತಾ ಇದೆ’ ಎಂದು ವೈದ್ಯರ ಬಳಿ ನೋವು ತೋಡಿಕೊಂಡರು. ಅವರು ತಮಗಿಂತ ತಮ್ಮ ಕುಟುಂಬ ಸದಸ್ಯರ ಬಗ್ಗೆ ಭಯಭೀತರಾಗಿದ್ದರು. ತೀವ್ರ ಖಿನ್ನತೆಗೆ ಒಳಗಾಗಿದ್ದು ಎದ್ದು ಕಾಣುತ್ತಿತ್ತು. ಕೂಡಲೇ ಅವರಿಗೆ ಆಪ್ತ ಸಮಾಲೋಚನೆ ಆರಂಭಿಸಲಾಯಿತು. ವಿಪರೀತ ಯೋಚನೆಯಿಂದ ಎರಡು, ಮೂರು ದಿನಗಳಿಂದ ನಿದ್ದೆ ಇಲ್ಲದೆ ಆತಂಕಕ್ಕೆ ಒಳಗಾಗಿದ್ದ ಅವರಿಗೆ ಒತ್ತಡ, ಖಿನ್ನತೆ ಶಮನ ಮಾಡುವ ಮಾತ್ರೆ ನೀಡಲಾಯಿತು.
ಮನೋವೈದ್ಯರ ತಂಡ ಪ್ರತಿದಿನ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದು, ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಈ ತರಹದ ಚಿಕಿತ್ಸೆ ಕೆಲಸ ಮಾಡಿತ್ತು. ನಾಲ್ಕಾರು ದಿನಗಳಲ್ಲಿ ಅವರು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡರು. ಆತ್ಮಸ್ಥೈರ್ಯ ಹೆಚ್ಚಾದಂತೆ ಸಹಜವಾಗಿ ಜ್ವರ, ಸುಸ್ತು ಕಡಿಮೆಯಾಯಿತು. ಎಲ್ಲರಂತೆ ಅವರೂ ಲವಲವಿಕೆಯಿಂದ ಓಡಾಡತೊಡಗಿದರು. ಚಲನಚಿತ್ರಗಳನ್ನು ವೀಕ್ಷಿಸತೊಡಗಿದರು. ವಾಕ್ ಜತೆಗೆ ವ್ಯಾಯಾಮ, ಯೋಗ ಮಾಡತೊಡಗಿದರು.
ತೀವ್ರ ಖಿನ್ನೆತೆಗೆ ಒಳಗಾಗಿ ಅಷ್ಟು ಬೇಗ ಚೇತರಿಸಿಕೊಂಡ ಅವರನ್ನು ಕಂಡು ಆಶ್ಚರ್ಯವಾಯಿತು. ಬಂದಾಗ ಅವರಲ್ಲಿ ಆತಂಕ ಮನೆಮಾಡಿತ್ತು. ಗುಣಮುಖರಾಗಿ ಮನೆಗೆ ಹೋಗುವಾಗ ಅವರ ಮುಖದಲ್ಲಿ ನಗುವಿತ್ತು. ಅದನ್ನು ಮರೆಯಲು ಸಾಧ್ಯವಿಲ್ಲ. ಈಗ ಸಂಪೂರ್ಣ ಗುಣಮುಖರಾಗಿ ಮನೆಯಲ್ಲಿರುವ ಅವರು, ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇತರ ಸೋಂಕಿತರಿಗೂ ಬದುಕುವ ಆಸೆತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.