ADVERTISEMENT

ಕೊರೊನಾ: ಬೆಂಗಳೂರು ನಗರದಲ್ಲಿ ಹೆಚ್ಚಿದ ನಿಗಾ

ಒಂದೇ ದಿನ 26 ಮಂದಿ ಒಳರೋಗಿಗಳಾಗಿ ದಾಖಲು, ಒಬ್ಬರಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 4:30 IST
Last Updated 20 ಮಾರ್ಚ್ 2020, 4:30 IST
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ದೇವೇಗೌಡ ಪೆಟ್ರೋಲ್ ಬಂಕ್ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು  –ಪ್ರಜಾವಾಣಿ ಚಿತ್ರ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ದೇವೇಗೌಡ ಪೆಟ್ರೋಲ್ ಬಂಕ್ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ 97 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಒಂದೇ ದಿನ 26 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್, ‘ಗುರುವಾರ 46 ಮಂದಿ ಸೋಂಕು ಶಂಕಿತರ ವರದಿ ಬಂದಿದ್ದು, ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ’ ಎಂದರು.

ವೈದ್ಯರ ವಿರುದ್ಧ ಕ್ರಮ:ಪ್ರಧಾನಿ ಕಚೇರಿಯು ಇಲ್ಲಿನ ಕರ್ನಾಟಕ ವೈದ್ಯಕೀಯ ಮಂಡಳಿಯನ್ನು (ಕೆಎಂಸಿ) ಸಂಪರ್ಕಿಸಿ, ಅಗರ್‌ವಾಲ್‌ನ ಕಣ್ಣಿನ ಆಸ್ಪತ್ರೆಯ ನೇತ್ರಶಾಸ್ತ್ರಜ್ಞೆ ಡಾ.ಸುನೀತಾ ಅಗರ್‌ವಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಯೂಟ್ಯೂಬ್ ವಿಡಿಯೊ ಒಂದರಲ್ಲಿ ಅವರು ಕೋವಿಡ್ -19 ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿದ್ದರು.

ADVERTISEMENT

‘ಪ್ರಧಾನಿ ಕಚೇರಿಯಿಂದ ಈ ಬಗ್ಗೆ ನನಗೆ ದೂರವಾಣಿ ಕರೆ ಬಂದಿತು. ಈ ಬಗ್ಗೆಅಶೋಕ್ ನಗರ ಠಾಣೆಗೆ ಮಾಹಿತಿ ನೀಡಿದ್ದೇನೆ. ಅವರ ವಿಚಾರಣೆ ನಡೆಯುತ್ತಿದೆ. ಅವರು ಹೇಳಿಕೊಂಡಿರುವ ಚಿಕಿತ್ಸೆಯನ್ನುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ಯಾವುದೇ ಶಾಸನಬದ್ಧ ಸಂಸ್ಥೆ ಮಾನ್ಯ ಮಾಡಿಲ್ಲ.ಆರು ತಿಂಗಳ ಕಾಲ ಕೆಎಂಸಿ ರಿಜಿಸ್ಟ್ರಿಯಿಂದ ಅವರ ಹೆಸರನ್ನು ತೆಗೆದು ಹಾಕಲಾಗಿದೆ’ ಎಂದುಡಾ.ಎಚ್‌. ವೀರಭದ್ರಪ್ಪ ತಿಳಿಸಿದರು.

‘ಡಾ.ಸುನೀತಾ ಅಗರ್‌ವಾಲ್ ಅವರು ಲ್ಯಾಂಗ್‌ಫೋರ್ಡ್‌ ಟೌನ್‌ನಲ್ಲಿರುವ ಅಗರವಾಲ್‌ ಆಸ್ಪತ್ರೆಯ ಸಂಸ್ಥಾಪಕರು. ಅವರಿಗೂ ನಮಗೂ ಸಂಬಂಧವಿಲ್ಲ’ ಎಂದು ಅಗರ್‌ವಾಲ್‌ ಕಣ್ಣಿನ ಆಸ್ಪತ್ರೆ ಸ್ಪಷ್ಟಪಡಿಸಿದೆ.

ಅಂಕಿ – ಅಂಶಗಳು

*15 – ಸೋಂಕು ದೃಢಪಟ್ಟ ಪ್ರಕರಣಗಳು

* 97 – ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರು

* 2,280 – ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲ್ಪಟ್ಟವರು

* 1,143 – ಪರೀಕ್ಷೆಗೆ ಸಂಗ್ರಹವಾದ ಒಟ್ಟು ಮಾದರಿಗಳು

* 915 – ಪರೀಕ್ಷಾ ವರದಿ ಪಡೆದವರು

ಮುಖಗವಸು ಒದಗಿಸಲು ಕ್ರಮ: ಡಿಸಿಎಂ

ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿಕಲಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿ ಬಿ. ಶರತ್ ಅವರ ಜತೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿಡಿಯೊ ಕಾನ್ಫರೆನ್ಸ್ ನಡೆಸಿ, ಮಾಹಿತಿ ಪಡೆದುಕೊಂಡರು.

‘ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾಸ್ಕ್‌ಗಳನ್ನು ಕೂಡಲೇ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಪಿಯು ಪರೀಕ್ಷೆ: ಜ್ವರ ಇದ್ದರೆ ಪ್ರತ್ಯೇಕ ಕೊಠಡಿ

ಪಿಯು ಪರೀಕ್ಷೆಗಳು ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಉಳಿದ ಪರೀಕ್ಷೆ ವೇಳೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ಗುಂಪು ಸೇರುವುದಕ್ಕೆ ನಿರ್ಬಂಧ, ಜ್ವರ ಇದ್ದವರಿಗೆ ಪ್ರತ್ಯೇಕ ಕೊಠಡಿ ಸಹಿತ 9 ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲಾಗಿದೆ.

ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಗುರುವಾರ ಸುತ್ತೋಲೆ ಹೊರಡಿಸಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕೈ ತೊಳೆಯಲು ಸ್ಯಾನಿಟೈಸರ್‌, ಸಾಬೂನು, ನೀರಿನ ವ್ಯವಸ್ಥೆ ಮಾಡಬೇಕು, ಎಲ್ಲಿಯೂ ವಿದ್ಯಾರ್ಥಿಗಳು ಗುಂಪು ಸೇರುವುದಕ್ಕೆ ಅವಕಾಶ ನೀಡಬಾರದು, ಮುಖಗವಸು ಧರಿಸುವುದಕ್ಕೆ ಅವಕಾಶ ನೀಡಬೇಕು, ಅಗತ್ಯ ಬಿದ್ದರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರ ಸಹಾಯ ಪಡೆಯಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.