ಕಾರ್ಯಕ್ರಮದಲ್ಲಿ ಡಾ. ಶರಣಪ್ರಕಾಶ್ ಪಾಟೀಲ ಹಾಗೂ ಸಿಸ್ಕೋ ಇಂಡಿಯಾದ ಯೋಜನಾ ವ್ಯವಸ್ಥಾಪಕಿ ಶ್ರೇಯಾ ಅರೋರಾ ಒಪ್ಪಂದದ ಪತ್ರವನ್ನು ವಿನಿಮಯ ಮಾಡಿಕೊಂಡರು. ಆರ್. ರಾಗಪ್ರಿಯಾ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕಾರ್ಪೊರೇಟ್ ಸಂಸ್ಥೆಗಳು ಕೂಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಉದ್ಯೋಗ ಆಧಾರಿತ ಕೌಶಲ ತರಬೇತಿ ಕೊಡಿಸಲು ಮುಂದಾಗಬೇಕು’ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಆಶಯ ವ್ಯಕ್ತಪಡಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
‘ಯುವ ಸಮೂಹಕ್ಕೆ ಕೌಶಲದ ತರಬೇತಿ ನೀಡಿ, ಸಬಲೀಕರಣ ಮಾಡಲು ಸರ್ಕಾರ ಈಗಾಗಲೇ ಹಲವು ಯೋಜನೆ ಕೈಗೊಂಡಿದೆ. ಕಾರ್ಪೊರೇಟ್ ಸಂಸ್ಥೆಗಳು ಕೂಡ ಈ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ರಾಜ್ಯದ ಹತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಧುನೀಕರಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಟಿಐ ಸಂಸ್ಥೆಗಳ ಉನ್ನತೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
‘ಐಟಿಐಗಳಲ್ಲಿರುವ ಹಳೆಯ ಉಪಕರಣಗಳನ್ನು ಬದಲಾವಣೆ ಮಾಡಿ, ಹೊಸ ಉಪಕರಣಗಳನ್ನು ಅಳವಡಿಸಲು ಮುಂದಾಗಿದ್ದೇವೆ. ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರು, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.
‘ಪ್ರಧಾನಮಂತ್ರಿ ಸೂರ್ಯ ಘರ್-ಮುಫ್ತ್ ಬಿಜ್ಲಿ ಯೋಜನೆಯಡಿ ರಾಜ್ಯದ 252 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ, ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸೌರ ಚಾವಣಿ ಅಳವಡಿಕೆ ಮತ್ತು ನಿರ್ವಹಣೆಯ ಬಗ್ಗೆ ಒಂದು ವಾರದ ತರಬೇತಿ ಪಡೆದಿದ್ದಾರೆ’ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ 10 ತರಬೇತುದಾರರಿಗೆ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಐಟಿಐಗಳ ಪ್ರಾಂಶುಪಾಲರಿಗೆ ವಿಶೇಷ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು. ಐಟಿಐಗಳಲ್ಲಿನ ಕುಂದುಕೊರತೆಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡು, ಅವುಗಳನ್ನು ಕೂಡಲೇ ನಿವಾರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತೆ ಆರ್. ರಾಗಪ್ರಿಯಾ ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರಾಜ್ಯದ 10 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ‘ಬ್ರಿಡ್ಜ್’ ಕಾರ್ಯಕ್ರಮ ಅನುಷ್ಠಾನಕ್ಕೆ ಬಾಷ್ ಲಿಮಿಟೆಡ್ ಮತ್ತು ಫಂಕ್ಷನಲ್ ವೊಕೇಷನಲ್ ಟ್ರೇನಿಂಗ್ ರಿಸರ್ಚ್ ಸೊಸೈಟಿ (ಎಫ್‌ವಿಟಿಆರ್‌ಎಸ್) ಜತೆಗೆ ಒಪ್ಪಂದ
ಬೆಂಗಳೂರು ಮತ್ತು ಕಲಬುರಗಿ ವಿಭಾಗಗಳಲ್ಲಿರುವ 126 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತುದಾರರು ಕಿರಿಯ ತರಬೇತಿ ಅಧಿಕಾರಿಗಳಿಗೆ ಉದ್ಯೋಗಾರ್ಹತಾ ಕೌಶಲಗಳ ತರಬೇತಿಗೆ ವಾಧ್ವಾನಿ ಫೌಂಡೇಶನ್ ಜತೆಗೆ ಒಪ್ಪಂದ
ಮೈಸೂರು ಬೆಳಗಾವಿ ವಿಭಾಗಗಳ 144 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತುದಾರರು ಕಿರಿಯ ತರಬೇತಿ ಅಧಿಕಾರಿಗಳಿಗೆ ಉದ್ಯೋಗಾರ್ಹತಾ ಕೌಶಲಗಳ ತರಬೇತಿ ನೀಡಲು ಕ್ವೆಸ್ಟ್ ಅಲಯನ್ಸ್ ಜತೆಗೆ ಒಪ್ಪಂದ
20 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೌರ ವಿದ್ಯುತ್ ಮತ್ತು ಕೈಗಾರಿಕಾ ಸ್ವಯಂಚಾಲನ ವ್ಯಾಪಾರಗಳಿಗೆ ಪ್ರಯೋಗಾಲಯಗಳನ್ನು ಸ್ಥಾಪಿಸಲು ಶ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಫೌಂಡೇಷನ್ ಜತೆಗೆ ಒಪ್ಪಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.