ADVERTISEMENT

ಭ್ರಷ್ಟಾಚಾರ: 22 ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 21:14 IST
Last Updated 21 ಆಗಸ್ಟ್ 2021, 21:14 IST
 ಕಮಲ್ ಪಂತ್
ಕಮಲ್ ಪಂತ್   

ಬೆಂಗಳೂರು: ‘ಲಂಚ ಪಡೆಯುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಭ್ರಷ್ಟಾಚಾರ ಆರೋಪದಡಿ ಪ್ರಸಕ್ತ ವರ್ಷ 22 ಪೊಲೀಸರನ್ನು ಅಮಾನತು ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ಫೇಸ್‌ಬುಕ್‌’ನಲ್ಲಿ ಶನಿವಾರ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದ ಕಮಲ್ ಪಂತ್, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಸಾರ್ವಜನಿಕರೊಬ್ಬರು, ‘ಹಲವು ಪೊಲೀಸರು ಲಂಚಕ್ಕೆ
ಬೇಡಿಕೆ ಇಡುತ್ತಿದ್ದಾರೆ’ ಎಂದು ದೂರಿದರು.

ಕಮಲ್ ಪಂತ್, ‘ಲಂಚ ಕೇಳಿದವರ ವಿರುದ್ಧ ದೂರು ನೀಡಿ. ನಿಮ್ಮ ಹೆಸರು ಗೌಪ್ಯವಾಗಿರಿಸಲಾಗುವುದು. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ನಿಶ್ಚಿತ’ ಎಂದರು.

ADVERTISEMENT

ಸ್ಥಳದಲ್ಲಿ ದಂಡ ವಿಧಿಸುವುದು ಅನಿವಾರ್ಯ: ಸಂಚಾರ ಪೊಲೀಸರ ಕಿರಿಕಿರಿ ಬಗ್ಗೆ ಹಲವು ಸಾರ್ವಜನಿಕರು ದೂರು ಹೇಳಿಕೊಂಡರು.

ಕಮಲ್ ಪಂತ್, ‘ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗಿದೆ. ಅಷ್ಟಾದರೂ ಬಹುತೇಕರು ದಂಡ ಪಾವತಿಸಿಲ್ಲ. ಹೀಗಾಗಿ, ಸ್ಥಳದಲ್ಲೇ ದಂಡ ವಿಧಿಸುವುದು ಅನಿವಾರ್ಯ’ ಎಂದರು.

‘ವಾಹನ ನಿಲುಗಡೆ ನಿಷೇಧಿಸಿರುವ ಜಾಗದಲ್ಲಿ ನಿಲ್ಲಿಸುವ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡುವ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಹಾಗೂ ಬೆದರಿಸುವುದು ಸರಿಯಲ್ಲ’ ಎಂದು ಕಮಲ್ ಪಂತ್ ಎಚ್ಚರಿಸಿದರು.

ಸಂಚಾರ ಪೊಲೀಸರಿಗೂ ಸೂಚನೆ ನೀಡಿದ ಕಮಿಷನರ್, ‘ನೋ ಪಾರ್ಕಿಂಗ್ ಅಥವಾ ನಡುರಸ್ತೆಯಲ್ಲಿ ವಾಹನ ನಿಲ್ಲಿಸಿರುವುದನ್ನು ವಿಡಿಯೊ ಮಾಡಿಕೊಳ್ಳಬೇಕು. ನಂತರ, ಧ್ವನಿವರ್ಧಕದಲ್ಲಿ ವಾಹನದ ನೋಂದಣಿ ಸಂಖ್ಯೆ ಕೂಗಬೇಕು. ಬಳಿಕವೇ ವಾಹನ ಟೋಯಿಂಗ್ ಮಾಡಬೇಕು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.