ADVERTISEMENT

₹60 ಕೋಟಿ ವೇತನ ಹಿಂಬಾಕಿ ಪಾವತಿಯಲ್ಲಿ ಅಕ್ರಮ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:45 IST
Last Updated 23 ಡಿಸೆಂಬರ್ 2021, 19:45 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ‘ದಿನಗೂಲಿ ನೌಕರರನ್ನು ಕಾಯಂ ಮಾಡುವ ಸುಳ್ಳು ಆಶ್ವಾಸನೆ ನೀಡುವ ಮೂಲಕ ₹60 ಕೋಟಿ ಲೂಟಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಶರತ್‌ ಖಾದ್ರಿ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2007ರಲ್ಲಿ ಬಿಬಿಎಂಪಿ ಸೇರಿದ 110 ಹಳ್ಳಿಗಳ ವ್ಯಾಪ್ತಿ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿದ್ದ 534 ದಿನಗೂಲಿ ನೌಕರರನ್ನು ಬಿಬಿಎಂಪಿಗೆ ವಿಲೀನಗೊಳಿಸಲಾಗಿತ್ತು. ವೇತನ ಹೆಚ್ಚಳಕ್ಕೆ ನೌಕರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ವೇತನ ಪಾವತಿ ಆಗಿರಲಿಲ್ಲ. 2013ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನ್ಯಾಯಾಲಯದ ಆದೇಶ ನೀಡಿತ್ತು. ಈ ತನಕದ ವೇತನ ಪಾವತಿಯೇ ಆಗಿಲ್ಲ’ ಎಂದು ವಿವರಿಸಿದರು.

‘ಒಟ್ಟಾರೆ ₹60 ಕೋಟಿ ಹಿಂಬಾಕಿ ಮೊತ್ತವನ್ನು ಬಿಬಿಎಂಪಿ ಈಗ ಬಿಡುಗಡೆಗೊಳಿಸಿದೆ.ದಿನಗೂಲಿ ನೌಕರರ ಖಾತೆಗೆ ₹ 10 ಲಕ್ಷದಿಂದ ₹ 15 ಲಕ್ಷದವರೆಗೆ ಹಣ ವರ್ಗಾವಣೆಯಾಗಿದೆ. ಅಷ್ಟೂ ಹಣ ಲೂಟಿ ಮಾಡಲು ಅಧಿಕಾರಿಗಳು ತಂತ್ರ ಹೆಣೆದಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪ್ರಕಾರ ದಿನಗೂಲಿ ನೌಕರರನ್ನು ಕಾಯಂಗೊಳಿಸಲು ಅವಕಾಶ ಇಲ್ಲ. ಆದರೂ, ಈ ನೌಕರರನ್ನು ಕಾಯಂಗೊಳಿಸುವುದಾಗಿ ಸುಳ್ಳು ಹೇಳಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಲಂಚ ಕೊಡಲು ಹಣ ಇಲ್ಲ ಎಂದು ಕೈಚೆಲ್ಲಿರುವ ಕಾರ್ಮಿಕರಿಗೆ, ಬಿಡುಗಡೆ ಮಾಡಲಾದ ಹಿಂಬಾಕಿ ಮೊತ್ತವನ್ನೇ ಲಂಚವಾಗಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ’ ದೂರಿದರು.

ಆಮ್‌ ಆದ್ಮಿ ಪಕ್ಷದ ಬೆಂಗಳೂರು ವಿಭಾಗದ ಅಧ್ಯಕ್ಷ ಮೋಹನ ದಾಸರಿ, ‘‌ಈ ಪ್ರಕರಣವನ್ನು ಗಮನಿಸಿದರೆ ಶೇ 40ರಷ್ಟು ಲಂಚ ಪಡೆಯುವ ಸರ್ಕಾರ ಇದಲ್ಲ, ಶೇ 100ರಷ್ಟು ಲಂಚದ ಸರ್ಕಾರ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.