ADVERTISEMENT

ದೇವೇಂದ್ರಪ್ಪ ವಿರುದ್ಧ ಮತ್ತೊಂದು ಪ್ರಕರಣ

ಎರಡು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳ ಶೋಧ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:33 IST
Last Updated 3 ಮಾರ್ಚ್ 2021, 2:33 IST

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ವಿಭಾಗದ ಹಿಂದಿನ ಸಹಾಯಕ ನಿರ್ದೇಶಕ ಎಸ್‌.ಎನ್‌. ದೇವೇಂದ್ರಪ್ಪ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಮಂಗಳವಾರ ಎರಡು ಸ್ಥಳಗಳಲ್ಲಿ ಶೋಧ ನಡೆಸಿದೆ.

ನಗರದ ಅಮೃತನಗರ ಸಿ ಸೆಕ್ಟರ್‌ನಲ್ಲಿರುವ ದೇವೇಂದ್ರಪ್ಪ ಅವರ ಮನೆ ಹಾಗೂ ಹಲಸೂರಿನ ಗುಪ್ತ ಬಡಾವಣೆಯಲ್ಲಿರುವ ಅವರ ಆಪ್ತ ಶ್ರೀನಿವಾಸಮೂರ್ತಿ ಅವರ ಮನೆಗಳ ಮೇಲೆ ದಾಳಿಮಾಡಿದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಶೋಧದ ವೇಳೆ ಒಂದು ನಿವೇಶನ, ಬ್ಯಾಂಕ್‌ ಲಾಕರ್‌ಗಳಲ್ಲಿದ್ದ ₹ 25 ಲಕ್ಷ ನಗದು, ಬ್ಯಾಂಕ್‌ ಖಾತೆಗಳಲ್ಲಿದ್ದ ₹ 45 ಲಕ್ಷ ಠೇವಣಿ ಹಾಗೂ ₹ 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.