ADVERTISEMENT

ಸಾಮಾಜಿಕ ಕಾರ್ಯಕ್ಕೆ ದಂಪತಿಯ ಸಾಹಸ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:31 IST
Last Updated 17 ಅಕ್ಟೋಬರ್ 2021, 19:31 IST
ರಂಜನಾ ಭಟ್ಟ ಮತ್ತು ಅಭಿಷೇಕ್
ರಂಜನಾ ಭಟ್ಟ ಮತ್ತು ಅಭಿಷೇಕ್   

ಬೆಂಗಳೂರು: ಸಾಮಾಜಿಕ ಕಾರ್ಯದ ಉದ್ದೇಶಕ್ಕಾಗಿ ಅಭಿಷೇಕ್‌ ಮತ್ತು ರಂಜನಾ ಭಟ್ಟ ದಂಪತಿ, ಪ್ರವಾಸ ಮತ್ತು ಸಾಹಸ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ವಿಭಿನ್ನ ಪ್ರಯತ್ನದಲ್ಲಿ ಸಾಗಿದ್ದಾರೆ.

ಸದ್ಯ ಬ್ರಿಟನ್‌ನಲ್ಲಿ ನೆಲೆಸಿರುವ ಅವರು ತಮ್ಮ ಹವ್ಯಾಸಕ್ಕೆ ಮಾನವೀಯತೆಯ ಸ್ಪರ್ಶ ನೀಡಿದ್ದಾರೆ. ತಾವು ಕೈಗೊಳ್ಳುವ ಸಾಹಸ ಕಾರ್ಯಕ್ಕೆ ಹಣ ಸಂಗ್ರಹಿಸಿ ಸಂಕಷ್ಟದಲ್ಲಿರುವವರಿಗೆ ಮತ್ತು ಬಡವರಿಗೆ ನೀಡುತ್ತಿದ್ದಾರೆ.

ಬಿಡುವಿನ ವೇಳೆಯಲ್ಲಿ ಈ ದಂಪತಿ ಸದಾ ವೈವಿಧ್ಯಮಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಜತೆಗೆ, ಗುಡ್ಡ, ಬೆಟ್ಟಗಳನ್ನು ಏರುವುದು ಇವರ ನೆಚ್ಚಿನ ಹವ್ಯಾಸ.

ADVERTISEMENT

ಕಳೆದ ಆಗಸ್ಟ್‌ 8ರಿಂದ ಮೂರು ಶಿಖರಗಳನ್ನೇರುವ ಸಾಹಸ ಕಾರ್ಯವನ್ನು ಇವರು ಕೈಗೊಂಡಿದ್ದರು. ಸ್ಕಾಟ್‌ಲೆಂಡ್‌ನ ಬೆನ್‌ ನೆವಿಸ್‌, ಇಂಗ್ಲೆಂಡ್‌ನ ಸ್ಕಾಫೆಲ್‌ ಪೈಕ್‌ ಹಾಗೂ ವೇಲ್ಸ್‌ನಲ್ಲಿರುವ ಸ್ನೊಡಾನ್‌ ಶಿಖರಗಳನ್ನು ಏರಿದ್ದರು. ಒಟ್ಟು 37 ಕಿಲೋ ಮೀಟರ್‌ ಸಾಹಸ ಪ್ರಯಾಣ ಇದಾಗಿತ್ತು. ಒಟ್ಟು 10,052 ಅಡಿಗಳಷ್ಟು ಎತ್ತರ ಏರುವ ಸಾಹಸ ಮಾಡಿದ್ದಾರೆ.

ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ‘ಮಾರ್ಗ’ಕ್ಕಾಗಿ ಹಣ ಸಂಗ್ರಹಿಸಲು ಅವರು ಈ ಸಾಹಸ ಕಾರ್ಯಕೈಗೊಂಡಿದ್ದರು. ಅಭಿಷೇಕ್‌ ಮತ್ತು ರಂಜನಾ ಭಟ್ಟ ದಂಪತಿ ಈ ಸಾಹಸ ಕಾರ್ಯದಿಂದ 2,000 ಪೌಂಡ್‌ (ಸುಮಾರು ₹2ಲಕ್ಷ ) ಸಂಗ್ರಹಿಸಿದ್ದರು.

ಕೋವಿಡ್‌–19ನಿಂದ ಸಂಕಷ್ಟಕ್ಕೆ ಸಿಲುಕಿದ ಕೊಳೆಗೇರಿ ಪ್ರದೇಶದಲ್ಲಿ ಬಡವರಿಗೆ ನೆರವು ನೀಡುವುದಕ್ಕೆ ಈ ಹಣವನ್ನು ಬಳಸಲಾಗುತ್ತಿದೆ.

ನಗರ ಪ್ರದೇಶದ ಕೊಳೆಗೇರಿ ಪ್ರದೇಶ ಮತ್ತು ಬೀದಿಗಳಲ್ಲಿ ವಾಸಿಸುವವರಿಗೆ ‘ಮಾರ್ಗ’ ನೆರವು ನೀಡುತ್ತದೆ. ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ಸಂಕಷ್ಟಕ್ಕೆ ಸಿಲುಕಿದ 20 ಕೊಳೆಗೇರಿ ಪ್ರದೇಶದಲ್ಲಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ‘ಮಾರ್ಗ ಸಂಸ್ಥೆ’ ತೊಡಗಿದೆ.

‘ದೇಶ ಸುತ್ತಬೇಕು, ಕೋಶ ಓದಬೇಕು. ಪ್ರವಾಸದಿಂದ ಸಾಕಷ್ಟು ಕಲಿಯಬಹುದು. ಅಮೆರಿಕ ಮತ್ತು ಬ್ರಿಟನ್‌ ಸೇರಿದಂತೆ 25 ದೇಶಗಳಲ್ಲಿ ಸುತ್ತಾಡಿದ್ದೇವೆ’ ಎಂದು ರಂಜನಾ ಭಟ್ಟ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.