ADVERTISEMENT

ಬೆಂಗಳೂರು: ಲಾಕ್‌ಡೌನ್ ವೇಳೆ 15,241 ಕೊರೊನಾ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:48 IST
Last Updated 21 ಜುಲೈ 2020, 19:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಲಾಕ್‌ ಡೌನ್ ಜಾರಿಯಿದ್ದ ಎಂಟು ದಿನಗಳ ಅವಧಿಯಲ್ಲಿ 15,241 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಅಗತ್ಯ ಸಿದ್ಧತೆ ಸಂಬಂಧ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್ ಅವಧಿ ಮುಕ್ತಾಯವಾಗಿದೆ. ಈ ಅವಧಿಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಮಂಗಳವಾರ 4,932 ಆರ್‌ಟಿಪಿಸಿಆರ್ ಹಾಗೂ 2,243 ಆ್ಯಂಟಿಜೆನ್ ಪರೀಕ್ಷೆ ಮಾಡಲಾಗಿದೆ. ಹೊಸದಾಗಿ 1,714 ಮಂದಿ ಕೊರೊನಾ ಸೋಂಕಿತರಾಗಿರುವುದು ಹಾಗೂ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,943 ಹಾಗೂ ಮೃತಪಟ್ಟವರ ಸಂಖ್ಯೆ 720ಕ್ಕೆ ಏರಿಕೆಯಾಗಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಗರಿಷ್ಠ (429) ಸೋಂಕಿತರು ಪತ್ತೆಯಾಗಿದ್ದಾರೆ. ಬೊಮ್ಮನಹಳ್ಳಿಯಲ್ಲಿ 145, ದಾಸರಹಳ್ಳಿಯಲ್ಲಿ 20, ಪೂರ್ವ ವಲಯದಲ್ಲಿ 391, ಮಹದೇವಪುರ
ದಲ್ಲಿ 77, ಆರ್.ಆರ್. ನಗರದಲ್ಲಿ 111, ಪಶ್ಚಿಮ ವಲಯದಲ್ಲಿ 313 ಹಾಗೂ ಯಲಹಂಕದಲ್ಲಿ 131 ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ADVERTISEMENT

ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆ ಕೂಡ ಅಧಿಕವಾಗಿದೆ. 520 ಮಂದಿ ಮಂಗಳವಾರ ಗುಣಮುಖರಾಗಿದ್ದಾರೆ. ಇದರಿಂದಾಗಿ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 7,476ಕ್ಕೆ ತಲುಪಿದೆ. ಸದ್ಯ 26,746 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 336 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ 282 ಹಾಸಿಗೆ: ನಗರದಲ್ಲಿ ಕೋವಿಡ್ ಚಿಕಿತ್ಸೆಗೆ ಗುರುತಿಸಲಾದ 16 ಸರ್ಕಾರಿ ಆಸ್ಪತ್ರೆಗಳಲ್ಲಿ 282 ಹಾಸಿಗೆಗಳು ಮಾತ್ರ ಖಾಲಿಯಿವೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಿದ್ಧಗೊಳಿಸಲಾಗಿದ್ದ 2,624 ಹಾಸಿಗೆಗಳಲ್ಲಿ 2,231 ಹಾಸಿಗೆಗಳು ಭರ್ತಿಯಾಗಿವೆ. ಸದ್ಯ ಅಲ್ಲಿ 393 ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಹಾಸಿಗೆಗಳು ಖಾಲಿಯಿವೆ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೂಡ ಬಹುತೇಕ ಹಾಸಿಗೆಗಳು ಭರ್ತಿಯಾಗಿದ್ದು, 26 ಹಾಸಿಗೆಗಳು ಮಾತ್ರ ಖಾಲಿಯಿವೆ.

ಖಾಸಗಿ ಆಸ್ಪತ್ರೆಗಳಲ್ಲಿ 1,066 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 4,849 ಹಾಸಿಗೆಗಳನ್ನು ಗುರುತಿಸಲಾಗಿದ್ದು, ಇನ್ನೂ 3,783 ಹಾಸಿಗೆಗಳು ಖಾಲಿಯಿವೆ.

ಕೋವಿಡ್: ಹೆಚ್ಚಿದ ಕಾರ್ಯದೊತ್ತಡ

ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ಈವರೆಗೆ 35 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೆಚ್ಚುತ್ತಿದ್ದು, ಅವರಿಗೆ ಕ್ವಾರಂಟೈನ್‌ ಕೂಡ ಮಾಡುತ್ತಿಲ್ಲ.

ರಾಜ್ಯದಲ್ಲಿ ಮೊದಲ ಕೋವಿಡ್‍ಪ್ರಕರಣ ವರದಿಯಾದಾಗಿನಿಂದ (ಮಾ.8) ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಬಳಿಕ ಕೋವಿಡ್‌ ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡಿದರೂ ಸೋಂಕು ಶಂಕಿತರನ್ನು ದಾಖಲಿಸಿಕೊಂಡು, ಆರೈಕೆ ಮಾಡಲಾಗುತ್ತಿತ್ತು. ಈಗ ನಗರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾದ ಪರಿಣಾಮ ಕೊರೊನಾ ಸೋಂಕಿತರಿಗೆ 104 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದವರಲ್ಲಿ ಈಗಾಗಲೇ 22 ಮಂದಿ ಶುಶ್ರೂಷಕಿಯರಿಗೆ ಸೋಂಕು ತಗುಲಿದೆ. ಪರಿಣಾಮ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಉಂಟಾಗಿದೆ.

‘20 ಮಂದಿ ಕಾಯಂ ಹಾಗೂ 65 ಮಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ತೀವ್ರ ನಿಗಾ ಘಟಕಗಳು ಕಾರ್ಯಾಚರಣೆಯಾಗುತ್ತಿವೆ. ಸಿಬ್ಬಂದಿ ಕೊರತೆಯಿಂದ ನಿರಂತರ ಕಾರ್ಯನಿರ್ವಹಿಸಬೇಕಾಗಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ನಿಗದಿತ ಅವಧಿಯ ಬಳಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು. ಆ ಪ್ರಕ್ರಿಯೆ ಕೂಡ ಇಲ್ಲಿ ನಡೆಯುತ್ತಿಲ್ಲ. ತುಟ್ಟಿಭತ್ಯೆಯನ್ನೂ ನೀಡಿಲ್ಲ’ ಎಂದು ಶುಶ್ರೂಷಕಿಯೊಬ್ಬರು ಬೇಸರ
ವ್ಯಕ್ತಪಡಿಸಿದರು.

‘ಆಸ್ಪತ್ರೆಯಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಕೂಡ ಇಲ್ಲ. ಸೂಕ್ತ ವ್ಯವಸ್ಥೆ ಇಲ್ಲದಿದ್ದರೂ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾಗಿದೆ. ಆತಂಕದಲ್ಲಿಯೇ ಮನೆಗೆ ತೆರಳುತ್ತಿದ್ದೇವೆ. ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ ಕಿಟ್) ಕೂಡ ಸಮರ್ಪಕವಾಗಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ

‘ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ ಕೆಲವರು ಸೋಂಕಿತರಾದ ಪರಿಣಾಮ ಸ್ವಲ್ಪ ಸಮಸ್ಯೆಯಾಗಿದೆ. ಸೋಂಕಿತರಾದವರು ಚೇತರಿಸಿಕೊಂಡ ಬಳಿಕ ಕೆಲಸದ ಹೊರೆ ಕಡಿಮೆಯಾಗಲಿದೆ. ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ವೈದ್ಯಕೀಯ ವಿದ್ಯಾರ್ಥಿಗಳು ವಾಪಸ್ ಆಗಲಿದ್ದು, ಅವರನ್ನು ಕೂಡ ಕೋವಿಡ್ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.