ADVERTISEMENT

ಕೋವಿಡ್‌ ಪರೀಕ್ಷೆ: ಸಂಘರ್ಷ ಬೇಡ ಸಹಕಾರ ನೀಡಿ

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಮನವಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:52 IST
Last Updated 19 ಅಕ್ಟೋಬರ್ 2020, 16:52 IST
   

ಬೆಂಗಳೂರು:‘ನಗರದಲ್ಲಿ ಕೊರೊನಾ ಸೋಂಕು ಹಬ್ಬುವಿಕೆಯನ್ನು ಹತೋಟಿಗೆ ತರಬೇಕಾದರೆ ಹೆಚ್ಚು ಹೆಚ್ಚು ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯ. ಹಾಗಾಗಿ ಕೋವಿಡ್‌ ಪರೀಕ್ಷೆ ನಡೆಸುವ ಬಿಬಿಎಂಪಿ ಸಿಬ್ಬಂದಿ ಜೊತೆ ಸಂಘರ್ಷಕ್ಕೆ ಮುಂದಾಗದೇ ಸಹಕಾರ ನೀಡಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮನವಿ ಮಾಡಿದರು.

‘ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ, ಅವರ ಜೊತೆ ನೇರ ಸಂಪರ್ಕ ಹೊಂದಿದವರು ಹಾಗೂ ಪರೋಕ್ಷ ಸಂಪರ್ಕಹೊಂದಿದವರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಲ್ಲದೇ, ಕೆಮ್ಮು, ಶೀತ ಜ್ವರದ (ಐಎಲ್‌ಐ) ಲಕ್ಷಣ ಇರುವವರು ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುವವರೂ ರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ. ಕೋವಿಡ್‌ ಪರೀಕ್ಷೆ ನಡೆಸಲು ಬರುವ ಬಿಬಿಎಂಪಿ ಸಿಬ್ಬಂದಿ ಜೊತೆಗೆ ಕೆಲವರು ಜಗಳವಾಡುತ್ತಿದ್ದಾರೆ ಎಂಬ ದೂರುಗಳಿವೆ. ಇದು ಸರಿಯಲ್ಲ. ಸೋಂಕಿತರನ್ನು ಪ್ರತ್ಯೇಕಪಡಿಸುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲಾಗುತ್ತಿದೆಯೇ ಹೊರತು ಅನ್ಯ ಕಾರಣದಿಂದಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯಲ್ಲೇ ಅತಿಹೆಚ್ಚು ಕೋವಿಡ್‌ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ನಾವು ದಿನಕ್ಕೆ 50 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಇವುಗಳಲ್ಲಿ ರ‍್ಯಾಪಿಡ್‌ ಆಂಟಿಜೆನ್‌ ಪರೀಕ್ಷೆಗಳ ಪ್ರಮಾಣ ಶೇ 20ರಷ್ಟು ಮಾತ್ರ. ಶೇ 80ರಷ್ಟು ಆರ್‌ಟಿಪಿಸಿಆರ್‌ ಪರೀಕ್ಷೆಗೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯು ನಿಖರವಾದ ಫಲಿತಾಂಶ ನೀಡುವುದರಿಂದ ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ADVERTISEMENT

‘ಬಿಬಿಎಂಪಿಯ ಕೇಂದ್ರ ಪ್ರದೇಶದ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ವಲಯದಲ್ಲಿ ಕೋವಿಡ್‌ ಈಗಾಗಲೇ ಗರಿಷ್ಠ ಹಂತ ತಲುಪಿ, ಸೋಂಕು ಹಬ್ಬುವ ಪ್ರಮಾಣ ಇಳಿಮುಖವಾಗುತ್ತಿದೆ. ಆದರೆ, ಹೊರವಲಯದಲ್ಲಿ ಸೋಂಕು ಪತ್ತೆ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ ಹೊರವಲಯಗಳ ವಾರ್ಡ್‌ಗಳಲ್ಲಿ ಆರ್‌ಟಿಪಿಸಿಆರ್‌ ಪ್ರಮಾಣವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

‘ಭಾರಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣದ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಂತಹ ಕಡೆ ಒಬ್ಬ ಕಾರ್ಮಿಕನಿಗೆ ಸೋಂಕು ಕಾಣಿಸಿಕೊಂಡರೂ ಅದು ಇತರರಿಗೆ ಹಬ್ಬುವ ಸಾಧ್ಯತೆ ಇದೆ. ಹಾಗಾಗಿ ಕಾರ್ಮಿಕರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಒಂದು ವೇಳೆ ಪರೀಕ್ಷೆಗೆ ಸಹಕರಿಸದಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಅನಿವಾರ್ಯವಾದರೆ ಘಟಕವನ್ನೇ ಮುಚ್ಚಿಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಸಿದರು.

‘ಕೋವಿಡ್‌ ಪರೀಕ್ಷೆಗೆ ಸಹಕರಿಸದ ಕಾರಣಕ್ಕೆ ಈಗಾಗಲೇ ಗಾರ್ಮೆಂಟ್ಸ್‌ ಕಾರ್ಖಾನೆಯೊಂದಕ್ಕೆ ಬೀಗಮುದ್ರೆ ಹಾಕಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.