ADVERTISEMENT

ಚೇತರಿಕೆ ಶೇ 98, ಸಾವು ಶೇ 1ಕ್ಕಿಂತಲೂ ಕಡಿಮೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಗಣನೀಯ ಇಳಿಕೆ– ನಿತ್ಯ ಕೇವಲ 300ರಷ್ಟು ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:37 IST
Last Updated 27 ಜನವರಿ 2021, 16:37 IST

ಬೆಂಗಳೂರು: ನಿರಂತರವಾಗಿ ಭಾರಿ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ ಪ‍ರಿಣಾಮ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿವೆ.

‘ಒಂದೊಮ್ಮೆ ನಿತ್ಯ 6 ಸಾವಿರದಷ್ಟು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದ ನಗರದಲ್ಲಿ ಈಗ ನಿತ್ಯ ಹೆಚ್ಚೆಂದರೆ 300 ಹೊಸ ಪ್ರಕರಣಗಳು ಮಾತ್ರ ಕಂಡುಬರುತ್ತಿವೆ. ಪರೀಕ್ಷೆಗೊಳಗಾದವರಲ್ಲಿ ಸೋಂಕು ಪತ್ತೆ ಪ್ರಮಾಣ ಶೇ 0.97ರಷ್ಟಕ್ಕೆ ಇಳಿದಿದೆ. ಸೋಂಕಿನಿಂದ ಚೇತರಿಸಿಕೊಳ್ಳುವ ದರ ಶೇ 97.80 ಹಾಗೂ ಈ ಸೋಂಕಿನಿಂದ ಸಾವಿಗೀಡಾಗುವವರ ಪ್ರಮಾಣ ಶೇ O.70ರಷ್ಟಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕನ್ನು ಸಂಪೂರ್ಣ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಆಯುಕ್ತರು ಕೋವಿಡ್ ಕಾರ್ಯಪಡೆಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದರು.

ADVERTISEMENT

‘ನಗರದಲ್ಲಿ ಪ್ರತಿನಿತ್ಯ 60 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಯಿತು. ಇದರ ಪರಿಣಾಮ ಕೋವಿಡ್ ಹರಡದಂತೆ ತಡೆಯಲು ಸಾಧ್ಯವಾಗಿದೆ. ನಿತ್ಯ ಹೆಚ್ಚು ಹೆಚ್ಚು ಕೋವಿಡ್‌ ಪರೀಕ್ಷೆ ಮಾಡುವುದರಿಂದ ಸೋಂಕು ಹರಡುವಿಕೆಯನ್ನು ಇನ್ನೂ ಕಡಿಮೆ ಮಾಡಬಹುದು’ ಎಂದು ಆಯುಕ್ತರು ಅಭಿಪ್ರಾಯಪಟ್ಟರು.

‘ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲನೇ ಹಂತದಲ್ಲಿ 1,83,567 ಆರೋಗ್ಯ ಕಾರ್ಯಕರ್ತರು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ ಇದುವರೆಗೆ 56,025 (ಶೇ 30.52ರಷ್ಟು) ಮಂದಿ ಲಸಿಕೆ ಪಡೆದಿದ್ದಾರೆ. ಬುಧವಾರ 21,465 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಅವರಲ್ಲಿ 8,497 (ಶೇ 35ರಷ್ಟು) ಮಂದಿ ಲಸಿಕೆ ಪಡೆದಿದ್ದಾರೆ’ ಎಂದರು.

‘ನಿತ್ಯ 15ಸಾವಿರದಿಂದ 20 ಸಾವಿರ ಫಲಾನುಭವಿಗಳಿಗೆ ಲಸಿಕೆ ನೀಡಲು ಕ್ರಮವಹಿಸಿದರೆ 10 ರಿಂದ 15 ದಿನಗಳಲ್ಲಿ ಉಳಿದೆಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬಹುದು. ಆದರೆ, ಕೆಲವರು ಕಾರಣಾಂತರಗಳಿಂದ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಪಡೆಯಲು ಮುಂದೆ ಬಾರದವರಿಗೆ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು. ಯಾರಿಗೂ ಬಲವಂತಪಡಿಸಬಾರದು’ ಎಂದು ತಿಳಿಸಿದರು.

‘ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡಿದವರಿಗೆ ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ಬಿಬಿಎಂಪಿ, ಜಲಮಂಡಳಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸುಮಾರು 50 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವರ ಹೆಸರುಗಳನ್ನು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಯೂ ಬಹುತೇಕ ಮುಗಿದಿದೆ’ ಎಂದರು.

ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ಹಾಗೂ ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

3ನೇ ಹಂತದ ಲಸಿಕೆ: ಮಾರ್ಚ್‌ ಅಂತ್ಯದೊಳಗೆ ಪಟ್ಟಿ ಸಿದ್ಧ

‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 50 ವರ್ಷ ಮೇಲ್ಪಟ್ವರಿಗೆ ಹಾಗೂ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ50 ವರ್ಷದೊಳಗಿನವರನ್ನು ಗುರುತಿಸಬೇಕಿದೆ. ಈ ಸಲುವಾಗಿ ನಗರದಾದ್ಯಂತ ಸಮೀಕ್ಷೆ ನಡೆಸಿ ಮಾರ್ಚ್ ಅಂತ್ಯದೊಳಗೆ ಫಲಾನಭವಿಗಳ ಪಟ್ಟಿ ಸಿದ್ದಪಡಿಸಬೇಕು’ ಎಂದು ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ನಗರದಲ್ಲಿ ಸುಮಾರು 500 ಕೊಳೆಗೇರಿಗಳಿವೆ. ಮೂರನೇ ಹಂತದಲ್ಲಿ ಲಸಿಕೆ ಪಡೆಯಲು ಅರ್ಹತೆ ಪಡೆದ ಇಲ್ಲಿನ ನಿವಾಸಿಗಳನ್ನು ಗುರುತಿಸುವ ಕಾರ್ಯ ಆದ್ಯತೆ ಮೇರೆಗೆ ನಡೆಯಬೇಕು. ಸಿದ್ಧಪಡಿಸಿದ ಪಟ್ಟಿಯ ಪ್ರಕಾರ ಲಸಿಕೆ ನೀಡುವ ವೇಳಾಪಟ್ಟಿ ತಯಾರಿಸಬೇಕು’ ಎಂದರು.

‘ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕಿಯರು ನಡೆಸಿದ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೋರ್ಟಲ್‌ನ ‘ನಮ್ಮ ಸಮುದಾಯ’ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು. ಸರ್ಕಾರೇತರ ಸಂಸ್ಥೆಗಳ ಜೊತೆ ಸಭೆ ನಡೆಸಿಸಮೀಕ್ಷೆಗೆ ಸಹಕಾರ ಪಡೆಯಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.