ADVERTISEMENT

‘ಖಾಸಗಿ ಆಸ್ಪತ್ರೆಗಳಿಗೆ ಹಾಸಿಗೆ ವಾಪಸ್‌’–ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:46 IST
Last Updated 9 ಜೂನ್ 2021, 21:46 IST
ಬೆಡ್‌ಗಳು–ಸಾಂದರ್ಭಿಕ ಚಿತ್ರ
ಬೆಡ್‌ಗಳು–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ, ಸರ್ಕಾರಿ ಕೋಟಾದಲ್ಲಿ ಸದ್ಯದ ಪರಿಸ್ಥಿತಿಗೆ ಸಾಕಾಗುವಷ್ಟು ಹಾಸಿಗೆಗಳನ್ನು ಉಳಿಸಿ ಕೊಂಡು ಉಳಿದವುಗಳನ್ನು ಖಾಸಗಿ ಆಸ್ಪತ್ರೆಯವರಿಗೆ ಹಿಂದಿರುಗಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಂದ ಸರ್ಕಾರ ಪಡೆದುಕೊಂಡ ಹಾಸಿಗೆ ವಿಚಾರದ ಕುರಿತು ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಮಂಜುನಾಥ ಪ್ರಸಾದ್, ಬಿಬಿ ಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಜೊತೆ ಬುಧವಾರ ಚರ್ಚಿಸಿದ ಬಳಿಕ ಅವರು ಈ ವಿಷಯ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳ ಒಟ್ಟು ಹಾಸಿಗೆಗಳ ಪೈಕಿ ಶೇ 50ರಷ್ಟನ್ನು ಸರ್ಕಾರ ಪಡೆದುಕೊಂಡಿತ್ತು. ಅದರಲ್ಲಿ ಶೇ 30ರಷ್ಟು ಸಾಮಾನ್ಯ ಹಾಸಿಗೆಗಳನ್ನು ಮತ್ತು ಶೇ 20ರಷ್ಟು ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನ ಹಿಂದಿರುಗಿಸಲು ನಿರ್ಧರಿಸಲಾಗಿದೆ. ಆದರೆ, ಐಸಿಯು ಮತ್ತು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳನ್ನು ಹಿಂದಿರುಗಿಸದೆ ಸರ್ಕಾರದ ಬಳಿಯೇ ಇಟ್ಟುಕೊಳ್ಳಲಾಗುವುದು.ಕೋವಿಡ್‌ ಅಲ್ಲದ ರೋಗಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ತನ್ನ ಪಾಲಿನ ಕೋಟಾದಷ್ಟು ಹಾಸಿಗೆಗಳನ್ನು ಅಗತ್ಯಬಿದ್ದರೆ ಯಾವಾಗ ಬೇಕಾದರೂ ವಾಪಸು ಪಡೆಯಬಹುದು’ ಎಂದರು.

ADVERTISEMENT

ಹಣ ವಸೂಲಿ ಆರೋಪ: ಐದು ಆಸ್ಪತ್ರೆಗಳಿಗೆ ನೋಟಿಸ್

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಿದ ಆರೋಪಕ್ಕೆ ಕಾರಣ ಕೇಳಿ ಐದು ಆಸ್ಪತ್ರೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೋಟಿಸ್ ನೀಡಿದ್ದಾರೆ.

ಅಶ್ವಿನಿ ಆಸ್ಪತ್ರೆ, ಸೇಂಟ್ ಜಾನ್ಸ್ ಆಸ್ಪತ್ರೆ, ಆತ್ರೇಯ ಆಸ್ಪತ್ರೆ, ಕೆ.ಕೆ. ಆಸ್ಪತ್ರೆ ಮತ್ತು ಸ್ಪರ್ಶ ಆಸ್ಪತ್ರೆ ನೋಟಿಸ್ ಪಡೆದಿವೆ.

‘ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದು, ಚಿಕಿತ್ಸೆ ಒದಗಿಸಿರುವುದು ಸುವರ್ಣ
ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಗಮನಕ್ಕೆ ಬಂದಿದೆ. ಸರ್ಕಾರದ ಆದೇಶದಂತೆ ಟ್ರಸ್ಟ್‌ನಡಿ ನೋಂದಾ ಯಿತ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಕೋವಿಡ್ ಚಿಕಿತ್ಸೆ ಒದಗಿಸಬೇಕು. ಅಧಿಕ ದರವನ್ನು ಪಡೆದಿರುವ ಆಸ್ಪತ್ರೆಗಳು ಏಪ್ರಿಲ್ 1ಕ್ಕೆ ಅನ್ವಯ ವಾಗುವಂತೆ ಇಲ್ಲಿಯವರೆಗೆ ಕೋವಿಡ್ ಚಿಕಿತ್ಸೆಗೆ ಖಾಸಗಿಯಾಗಿ ದಾಖಲಾಗಿರುವ ರೋಗಿಗಳ ವಿವರ ಹಾಗೂ ಭರಿಸಲಾದ ವೆಚ್ಚದ ವಿವರವನ್ನು ಮೂರು ದಿನಗಳ ಒಳಗಾಗಿ ನೀಡಬೇಕು’ ಎಂದು ಜೆ. ಮಂಜುನಾಥ್ ತಿಳಿಸಿದ್ದಾರೆ.

‘ನಿಗದಿತ ಅವಧಿಯೊಳಗೆ ವಿವರವನ್ನು ಒದಗಿಸದಿದ್ದಲ್ಲಿ ತಮ್ಮ ಸಂಸ್ಥೆಯ ವಿರುದ್ಧ ಕೆಪಿಎಂಇ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.