ADVERTISEMENT

ಲಾಕ್‌ಡೌನ್‌ನಲ್ಲೂ ವಾಹನಗಳ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 22:36 IST
Last Updated 7 ಜೂನ್ 2021, 22:36 IST
ತುಮಕೂರು ರಸ್ತೆಯ ಟಿ. ದಾಸರಹಳ್ಳಿ ಬಳಿ ಸಾಲುಗಟ್ಟಿ ನಿಂತಿದ್ದ ವಾಹನಗಳು
ತುಮಕೂರು ರಸ್ತೆಯ ಟಿ. ದಾಸರಹಳ್ಳಿ ಬಳಿ ಸಾಲುಗಟ್ಟಿ ನಿಂತಿದ್ದ ವಾಹನಗಳು   

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಇದರ ನಡುವೆಯೂ ನಗರದ ಹಲವೆಡೆ ಸೋಮವಾರ ವಾಹನಗಳ ದಟ್ಟಣೆ ಕಂಡುಬಂತು.

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದ ಸಮಯದಲ್ಲೇ ನಗರದ ಹಲವು ಪ್ರದೇಶಗಳಲ್ಲಿ ವಾಹನಗಳು ಸಂಚರಿಸಿದವು. ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನಗಳು ರಸ್ತೆಗಳನ್ನು ಆವರಿಸಿದ್ದವು.

ಪೀಣ್ಯ, ಟಿ–ದಾಸರಹಳ್ಳಿ, ಜಾಲಹಳ್ಳಿ, 8ನೇ ಮೈಲಿ, ಯಶವಂತಪುರ, ನವರಂಗ್ ವೃತ್ತ, ಸ್ಯಾಂಕಿ ರಸ್ತೆ, ಮೈಸೂರು ರಸ್ತೆ ಹಾಗೂ ಇತರೆ ಕಡೆಯ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ‘ಅಗತ್ಯ ಸೇವೆ’ ಎಂಬ ಫಲಕ ಅಂಟಿಸಿಕೊಂಡಿದ್ದ ಕಾರುಗಳ ಸಂಚಾರವೂ ಹೆಚ್ಚಿನ ಸಂಖ್ಯೆಯಲ್ಲಿತ್ತು. ಅದರ ನಡುವೆಯೇ ಆಟೊಗಳ ಓಡಾಟವೂ ಇತ್ತು.

ADVERTISEMENT

ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ, ದಟ್ಟಣೆ ಉಂಟಾಯಿತು.

‘ಶನಿವಾರ, ಭಾನುವಾರ ನಗರದಲ್ಲಿ ಬಿಗಿ ಭದ್ರತೆ ಇತ್ತು. ಸೋಮವಾರ ಬೆಳಿಗ್ಗೆ ಹಲವರು ರಸ್ತೆಗೆ ಇಳಿದರು. ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಪ್ರಶ್ನಿಸಿದಾಗ, ಅಗತ್ಯ ಸೇವೆಗೆ ಹೊರಟಿರುವುದಾಗಿ ಸಬೂಬು ಹೇಳಿದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಗರದಿಂದ ಹೊರ ಜಿಲ್ಲೆಗಳಿಗೆ ಹಾಗೂ ಹೊರ ಜಿಲ್ಲೆಗಳಿಂದ ನಗರಕ್ಕೆ ವಾಹನಗಳು ಸಂಚರಿಸಿದವು. ಅಗತ್ಯ ವಸ್ತುಗಳ ಖರೀದಿ ಅವಧಿ ಮುಗಿದ ನಂತರ 736 ವಾಹನಗಳನ್ನು ಜಪ್ತಿ ಮಾಡಲಾಯಿತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.