ADVERTISEMENT

ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲೇ ಕೋವಿಡ್ ಸೋಂಕಿತರ ಆರೈಕೆಗೆ ಅವಕಾಶ

ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸುವಂತೆ ಆರ್‌ಡಬ್ಲ್ಯುಎಗಳಿಗೆ ಮನವಿ * ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 16:08 IST
Last Updated 11 ಜುಲೈ 2020, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳ ಸಂಘ ಹಾಗೂ ವಿವಿಧ ಕಂಪನಿಗಳು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ, ನಿರ್ವಹಿಸಲು ಆರೋಗ್ಯ ಇಲಾಖೆ ಅವಕಾಶ ನೀಡಿದೆ. ಈ ಸೋಂಕು ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡುವಂತೆ ಇವುಗಳಲ್ಲಿ ಮನವಿ ಮಾಡಿದೆ. ‌

ಈ ಸಂಬಂಧ ಇಲಾಖೆಯ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಹಂತದ ಲಕ್ಷಣಗಳಿಂದ ಬಳಲುತ್ತಿರುವವರನ್ನು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಕಾಯಿಲೆಗಳಿರದ 50 ವರ್ಷದೊಳಗಿನವರಿಗೆ ಮನೆಯಲ್ಲಿಯೇ ಆರೈಕೆಗೆ ಅವಕಾಶ ನೀಡಲಾಗಿದೆ. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇರದಿದ್ದಲ್ಲಿ ಅಂತಹವರಿಗೆ ಕೋವಿಡ್ ಆರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಸರ್ಕಾರವು ವಿವಿಧೆಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿದೆ. ಇವುಗಳೂ ಭರ್ತಿಯಾದರೆ ಆರ್‌ಡಬ್ಲ್ಯುಎ, ಅಪಾರ್ಟ್‌ಮೆಂಟ್ ಸಮುಚ್ಛಯದ ನಿವಾಸಿಗಳ ಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸಹಕಾರ ಪಡೆಯಲು ನಿರ್ಧರಿಸಿದೆ.

ADVERTISEMENT

ಯಾವ ಸೌಲಭ್ಯಗಳಿರಬೇಕು?

*ಖಾಲಿ ಮನೆಗಳು, ಸಮುದಾಯ ಸಭಾಂಗಣ, ಅಪಾರ್ಟ್‌ಮೆಂಟ್‌ ಸಮುಚ್ಛಯದಲ್ಲಿ ಆರೈಕೆಗೆ ಅವಕಾಶ ನೀಡಬಹುದು

* ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವಸತಿ ಸೌಕರ್ಯ ಒದಗಿಸಬೇಕು

*ಸ್ನಾನದ ಕೊಠಡಿ ಹಾಗೂ ಶೌಚಾಲಯವಿರುವ ಪ್ರತ್ಯೇಕ ಕೊಠಡಿಯಲ್ಲಿ ಆರೈಕೆಗೆ ಅವಕಾಶ ನೀಡಬೇಕು

* ಹಾಸಿಗೆಗಳು, ಪೀಠೋಪಕರಣಗಳು, ನಿರಂತರ ನೀರು ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಬೇಕು

*ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕ ಆಹಾರಕ್ಕೆ ವ್ಯವಸ್ಥೆ ಮಾಡಬೇಕು

*ಕಸ ಹಾಗೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.