ADVERTISEMENT

ಒಂದೇ ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿ: 22 ಬ್ಯಾಂಕ್‌ಗಳಿಗೆ ₹10 ಕೋಟಿ ವಂಚನೆ

ಆರೋಪಿಗಳು 10 ದಿನ ಪೊಲೀಸ್‌ ಕಸ್ಟಡಿಗೆ, ಸಾಲ ಪಡೆದು ಮನೆ– ನಿವೇಶನ ಖರೀದಿಸಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 0:21 IST
Last Updated 20 ಏಪ್ರಿಲ್ 2024, 0:21 IST
ನಾಗೇಶ್‌
ನಾಗೇಶ್‌   

ಬೆಂಗಳೂರು: ಒಂದೇ ಸ್ವತ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ  22  ವಿವಿಧ ಬ್ಯಾಂಕ್‌ಗಳಿಗೆ ಸಲ್ಲಿಸಿ ₹10 ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಾಣಸಿಗರಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ, ಇವರ ಸಂಬಂಧಿ ಶೋಭಾ, ಈಕೆಯ ಪತಿ ಶೇಷಗಿರಿ, ಸತೀಶ್ ಹಾಗೂ ಸುಮಾಳ ಸ್ನೇಹಿತೆ ವೇದಾ ಬಂಧಿತರು.

‘ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 10 ದಿನಗಳ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಸಾಲ ಪಡೆದು ಹಣ ಹೂಡಿಕೆ ಮಾಡಿರುವ ಸ್ಥಳಗಳ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬೇಗೂರು ಗ್ರಾಮದ ಜಾಗದಲ್ಲಿ ಕಟ್ಟಡವಿರುವುದಾಗಿ ನಾಗೇಶ್‌ ಹಾಗೂ ಸುಮಾ ದಂಪತಿ ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ದಾಖಲೆಗಳನ್ನೇ ಜಯನಗರ 3ನೇ ಬ್ಲಾಕ್‌ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ಗೆ ಅಡಮಾನವಿಟ್ಟು ಬ್ಯಾಂಕ್‌ನಿಂದ ಕಂತುಸಾಲ ಹಾಗೂ ಯಂತ್ರೋಪಕರಣ ಸಾಲವೆಂದು ₹1.30 ಕೋಟಿ ಪಡೆದುಕೊಂಡಿದ್ದರು. ನಂತರ ಸಾಲವನ್ನು ಮರುಪಾವತಿಸದೇ ವಂಚನೆ ಮಾಡಿದ್ದರು. ನಂತರ ಬ್ಯಾಂಕ್‌ ವ್ಯವಸ್ಥಾಪಕರು ದೂರು ನೀಡಿದ್ದರು. ಆ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಪ್ರಕರಣ ದಾಖಲಾದ ಮೇಲೆ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಅಡುಗೆ ಭಟ್ಟ ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾಳನ್ನು ಮೊದಲು ಬಂಧಿಸಲಾಯಿತು. ವಿಚಾರಣೆ ವೇಳೆ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕ್‌ಗಳಲ್ಲಿ ₹10 ಕೋಟಿ ಸಾಲ ಪಡೆದಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಉಳಿದವರನ್ನೂ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವು ಬ್ಯಾಂಕ್‌ಗಳಿಗೆ ಸಲ್ಲಿಸಿದ್ದರು. ಇವರ ಕೃತ್ಯಕ್ಕೆ ನೋಂದಾಣಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಬ್ಯಾಂಕ್‌ ಅಧಿಕಾರಿಗಳೂ ನೆರವು ನೀಡಿದ್ದ ಮಾಹಿತಿ ಸಿಕ್ಕಿದೆ. ಅವರನ್ನೂ ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ವಂಚನೆಗೆ ಸಂಬಂಧಿಸಿದಂತೆ 6 ಬ್ಯಾಂಕ್‌ಗಳಿಂದ ಮಾತ್ರ ದೂರು ದಾಖಲಾಗಿದೆ. ಉಳಿದ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಆರೋಪಿಗಳು ವಂಚನೆ ನಡೆಸಿರುವ ಹಣದಲ್ಲಿ ನಿವೇಶನ ಹಾಗೂ ಮನೆ ಖರೀದಿಸಿದ್ದಾರೆ. ಉಳಿದ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು 2014ರಿಂದಲೂ ವಿವಿಧ ಬ್ಯಾಂಕ್‌ಗಳಲ್ಲಿ ಕಂತು ಸಾಲ, ಯಂತ್ರೋಪಕರಣ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೇದ
ಶೇಷಗಿರಿ
ಶೋಭಾ
ಸತೀಶ್‌
ಸುಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.