ADVERTISEMENT

ಮಾಜಿ ಸ್ನೇಹಿತೆಗೆ ಕಿರುಕುಳ: ಸಿಇಒ ಬಂಧನ

ಯುವತಿಯ ಖಾಸಗಿ ಫೋಟೊ ಅಪ್‌ಲೋಡ್ ಮಾಡಿದ್ದ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 19:59 IST
Last Updated 4 ಅಕ್ಟೋಬರ್ 2019, 19:59 IST
ರಾಹುಲ್‌ಕುಮಾರ್
ರಾಹುಲ್‌ಕುಮಾರ್   

ಬೆಂಗಳೂರು: ಮಾಜಿ ಸ್ನೇಹಿತೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಅವರ ಮನೆಗೂ ಹೋಗಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿರಾಹುಲ್‌ಕುಮಾರ್ ಸಿಂಗ್ (28) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ರಾಹುಲ್‌ಕುಮಾರ್, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ನವೋದ್ಯಮ ಕಂಪನಿಯೊಂದರ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ). ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಯುವತಿ ಹಾಗೂ ಆರೋಪಿ ಪಾಲುದಾರಿಕೆಯಲ್ಲಿ ಕಂಪನಿಯೊಂದನ್ನು ಆರಂಭಿಸಿದ್ದರು. ಯುವತಿಯ ಸಾಮಾಜಿಕ ಜಾಲತಾಣಗಳ ಪಾಸ್‌ವರ್ಡ್‌ಗಳನ್ನು ಆರೋಪಿ ತಿಳಿದುಕೊಂಡಿದ್ದ. ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಕೆಲ ತಿಂಗಳ ಹಿಂದಷ್ಟೇ ಬೇರೆ ಬೇರೆ ಆಗಿದ್ದರು. ಕೋಪಗೊಂಡಿದ್ದ ಆರೋಪಿ, ಯುವತಿಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಿಗೆ ಲಾಗ್‌–ಇನ್ ಆಗಿ ಖಾಸಗಿ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದ’ ಎಂದರು.

ADVERTISEMENT

‘ಆತನ ವಿರುದ್ಧ ಸೆಪ್ಟೆಂಬರ್ 12ರಂದೇ ಯುವತಿ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಅದಾದ ನಂತರವೂ ಆರೋಪಿ ಯುವತಿಯನ್ನು ಹಿಂಬಾಲಿಸಲಾರಂಭಿಸಿದ್ದ. ಅಶ್ಲೀಲ ಸಂದೇಶವನ್ನೂ ಕಳುಹಿಸುತ್ತಿದ್ದ. ಕೋರಮಂಗಲದಲ್ಲಿರುವ ಯುವತಿ ಮನೆಗೂ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಲಾರಂಭಿಸಿದ್ದ. ನೊಂದ ಯುವತಿ, ಆರೋಪಿ ವಿರುದ್ಧ ಕೋರಮಂಗಲ ಠಾಣೆಗೆ ಎರಡನೇ ದೂರು ನೀಡಿದ್ದರು.’

’ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡುಆರೋಪಿಯನ್ನು ಬಂಧಿಸಲಾಗಿದೆ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.