ADVERTISEMENT

ಕಾನ್‌ಸ್ಟೆಬಲ್‌ ಹುದ್ದೆಗೆ ನಕಲಿ ದಾಖಲೆ; ಬಂಧನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:11 IST
Last Updated 24 ಜನವರಿ 2020, 23:11 IST

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಕಾನ್‌ಸ್ಟೆಬಲ್ ಹುದ್ದೆ ಪಡೆಯಲು ಯತ್ನಿ ಸಿದ್ದ ಉತ್ತರ ಪ್ರದೇಶದ ವಿಪಿನ್ ಶರ್ಮಾ (21) ಎಂಬಾತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಿಯುಸಿ ಓದಿರುವ ಆರೋಪಿ, ಬಿಎಸ್‌ಎಫ್‌ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಜ. 22ರಂದು ಯಲಹಂಕದಲ್ಲಿರುವ ಬಿಎಸ್‌ಎಫ್ ಕಚೇರಿಯಲ್ಲಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಯುತ್ತಿತ್ತು.ಅಭ್ಯರ್ಥಿ ಬಲಜಿತ್‌ ಸಿಂಗ್‌ ಎಂಬುವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆರೋಪಿ ಪರೀಕ್ಷೆಗೆ ಹಾಜರಾಗಿದ್ದ. ಆತನ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಆತನನ್ನು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಹುದ್ದೆ ಪಡೆಯುವ ಸಲುವಾಗಿ ಆರೋಪಿ ನಕಲಿ ವಾಸ್ತವ್ಯ ಪ್ರಮಾಣಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಅಂಕಪಟ್ಟಿಗಳನ್ನು ಸೃಷ್ಟಿಸಿದ್ದ. ಅವುಗಳನ್ನೇ ಸಂದರ್ಶನಕ್ಕೆ ತಂದಿದ್ದ. ಉತ್ತರ ಪ್ರದೇಶದ ಮನೋಜ್ ಕುಮಾರ್ ಮತ್ತು ಬುಲಿಂದ್ ಶಹರ್ ಎಂಬುವರು ₹55 ಸಾವಿರ ಪಡೆದು ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಆರೋಪಿ ಹೇಳುತ್ತಿದ್ದಾನೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.