ADVERTISEMENT

ಮಗು ಪಡೆಯಲು ಠಾಣೆ ಮೆಟ್ಟಿಲೇರಿದ ತಾಯಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:35 IST
Last Updated 2 ಜನವರಿ 2020, 23:35 IST

ಬೆಂಗಳೂರು: ತಮ್ಮ ಮೂರು ತಿಂಗಳ ಮಗುವನ್ನು ಡಿ. 16ರಂದು ಬೇರೆಯವರಿಗೆ ಸಾಕಲು ಕೊಟ್ಟಿದ್ದ ಖಾಸಗಿ ಕಾಲೇಜಿನ ಸಹ ಪ್ರಾಧ್ಯಾಪಕಿಯೊಬ್ಬರು, ಇದೀಗ ಆ ಮಗುವನ್ನು ವಾಪಸು ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಮಗು ಪಡೆದು ತಲೆಮರೆಸಿಕೊಂಡಿರುವವರ ಜೊತೆಗೆ ತಾಯಿ, ತಂದೆಯನ್ನೂ ಆರೋಪಿಗಳನ್ನಾಗಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

‘ಇದೊಂದು ವಿಶೇಷ ಪ್ರಕರಣ. ಮಗುವನ್ನು ಬೇರೆಯವರಿಗೆ ಸಾಕಲು ಅಕ್ರಮವಾಗಿ ಕೊಡುವುದು ಅಪರಾಧ. ಜೊತೆಗೆ, ಮಗುವನ್ನು ಪಡೆಯುವುದೂ ಕಾನೂನುಬಾಹಿರ. ಹೀಗಾಗಿಯೇ ಇಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.ಪತಿಯ

ADVERTISEMENT

ಸಂಬಂಧಿ ಮೂಲಕ ಕೊಟ್ಟಿದ್ದೆ: ‘ಮನೆಯಲ್ಲಿ ಪರಿಸ್ಥಿತಿ ಸರಿ ಇಲ್ಲದಿದ್ದರಿಂದ ಮಗುವನ್ನು ಸಾಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ, ಮಗುವನ್ನು ಬೇರೆಯವರಿಗೆ ಕೊಟ್ಟಿದ್ದೆ. ಇದೀಗ ಮಗುವನ್ನು ವಾಪಸು ಕೇಳಿದರೆ ಕೊಡುತ್ತಿಲ್ಲ. ಮಗು ಎಲ್ಲಿದೆ ಎಂಬುದನ್ನೂ ಹೇಳುತ್ತಿಲ್ಲ. ದಯವಿಟ್ಟು ಮಗು ಕೊಡಿಸಿ’ ಎಂದು ತಾಯಿ ದೂರಿನಲ್ಲಿ ಹೇಳಿದ್ದಾರೆ.

‘ಅಕ್ಟೋಬರ್‌ನಲ್ಲಿ ನನಗೆ ಗಂಡು ಮಗು ಆಗಿತ್ತು. ಬಾಣಂತನ ಮಾಡಲು ಸಂಬಂಧಿಕರಾಗಲಿ ಅಥವಾ ಕುಟುಂಬ
ದವರಾಗಲಿ ಯಾರೂ ಇರಲಿಲ್ಲ. ಪತಿಯೇ ಕಚೇರಿ ಕೆಲಸದ ಜೊತೆಗೆ ಮನೆ ಕೆಲಸವನ್ನೂ ಮಾಡುತ್ತಿದ್ದರು. ಇಂಥ ಸ್ಥಿತಿಯಲ್ಲಿ ಮಗುವನ್ನು ಸಾಕುವುದು ಹೇಗೆ ಎಂಬುದೇ ಚಿಂತೆ ಆಗಿತ್ತು’

‘ನನ್ನ ಪತಿಯ ಸಂಬಂಧಿಯಾಗಿರುವ ರಾಜ್ ಭಟ್ ಅವರೇ ಮಗುವನ್ನು ಬೇರೆಯವರಿಗೆ ಸಾಕಲು ಕೊಡಿ ಎಂದಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದೆ. ಡಿ. 16ರಂದು ಜನತಾ ಬಜಾರ್ ಬಳಿ ರಾಜ್‌ ಭಟ್‌ ಹಾಗೂ ಆತನ ಜೊತೆ ಬಂದಿದ್ದವರಿಗೆ ಮಗು ಕೊಟ್ಟು ಕಳುಹಿಸಿದ್ದೆ. ಮನೆಗೆ ವಾಪಸು ಬಂದಾಗ ಮಗುವನ್ನು ಬಿಟ್ಟು ಇರಲು ಆಗಲಿಲ್ಲ. ಪಶ್ಚಾತಾಪವಾಗಿ ಮನಸ್ಸಿಗೆ ತುಂಬಾ ನೋವಾಯಿತು’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಮಗುವನ್ನು ವಾಪಸು ಕೊಡಿಸುವಂತೆ ರಾಜ್‌ ಭಟ್‌ಗೆ ಕೋರಿದ್ದೆ. ಮಗು ಎಲ್ಲಿದೆ ಎಂಬುದೇ ಗೊತ್ತಿಲ್ಲವೆಂದು ಹೇಳಿದ್ದ ಆತ, ಬೇಕಾದರೂ ಪೊಲೀಸರಿಗೆ ದೂರು ಕೊಡಿ ಮುಂದೆ ಏನಾಗುತ್ತದೆ ನೋಡಿ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಅದರಿಂದ ನೊಂದು ಠಾಣೆಗೆ ದೂರು ನೀಡುತ್ತಿದ್ದೇವೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.