ADVERTISEMENT

ಗಾಂಜಾ ಪ್ರಕರಣ ದಾಖಲಿಸುವ ಬೆದರಿಕೆ: ₹2,500 ಸುಲಿಗೆ ಮಾಡಿದ ಗಸ್ತು ಪೊಲೀಸರು

ಅಳಲು ತೋಡಿಕೊಂಡ ಉದ್ಯೋಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 19:30 IST
Last Updated 13 ಜನವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಪಾಸಣೆ ನೆಪದಲ್ಲಿ ಅಡ್ಡಗಟ್ಟಿದ್ದ ಇಬ್ಬರು ಪೊಲೀಸರು ₹ 2,500 ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ವೈಭವ್ ಪಟೇಲ್ ಎಂಬುವವರು ಟ್ವೀಟ್ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.

‘ಹಿಮಾಚಲ ಪ್ರದೇಶದ ವೈಭವ್‌, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಘಟನೆ ನಡೆದಿರುವ ಪ್ರದೇಶ ವ್ಯಾಪ್ತಿಯ ಬಂಡೇಪಾಳ್ಯ ಠಾಣೆಗೆ ದೂರು ನೀಡುವಂತೆ ತಿಳಿಸಲಾಗಿದೆ’ ಎಂದು ಪೊಲೀಸ್ ಕಮಿಷನರೇಟ್‌ ಕಚೇರಿ ಮೂಲಗಳು ಹೇಳಿವೆ.

ದೂರಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ, ‘ನಿಮ್ಮ ಭಯ ಹಾಗೂ ಆತಂಕ ಅರ್ಥವಾಗಿದೆ. ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ಯತ್ನ: ‘ಜ. 11ರಂದು ತಡರಾತ್ರಿ ಕೆಲಸ ಮುಗಿಸಿ ರ‍್ಯಾಪಿಡೊ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದೆ. ಎಚ್‌ಎಸ್‌ಆರ್‌ ಲೇಔಟ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು (ಬಂಡೇಪಾಳ್ಯ ಠಾಣೆ), ಬೈಕ್ ಅಡ್ಡಗಟ್ಟಿದ್ದರು. ಎಲ್ಲಿಗೆ ಹೊರಟಿದ್ದೀರಾ ಎಂದು ಪ್ರಶ್ನಿಸಿ ಬ್ಯಾಗ್‌ ಪರಿಶೀಲಿಸಿದ್ದರು. ಇದೇ ವೇಳೆ ಗಮನಕ್ಕೆ ಬಾರದಂತೆ ಬ್ಯಾಗ್‌ನಲ್ಲಿ ಯಾವುದೋ ಸೊಪ್ಪು ಇರಿಸಿದ್ದರು’ ಎಂದು ವೈಭವ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಬ್ಯಾಗ್‌ನಿಂದ ಸೊಪ್ಪು ಹೊರಗೆ ತೆಗೆದಂತೆ ನಟಿಸಿದ್ದ ಪೊಲೀಸರು, ಗಾಂಜಾ ಸೇವನೆ ಮಾಡುತ್ತೀಯಾ? ಎಂದು ಬೆದರಿಸಿದ್ದರು. ಗಾಂಜಾ ಸೇವಿಸುವುದಿಲ್ಲ ಎಂದು ಬೇಡಿಕೊಂಡಿದ್ದೆ. ರ‍್ಯಾಪಿಡೊ ಬೈಕ್ ಸವಾರನಿಗೆ ನನ್ನಿಂದ ₹100 ಕೊಡಿಸಿ ಆತನನ್ನು ಸ್ಥಳದಿಂದ ಕಳುಹಿಸಿದ್ದರು. ನನ್ನನ್ನು ಹಿಡಿದುಕೊಂಡಿದ್ದ ಪೊಲೀಸರು, ‘ನಿನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಜೈಲಿಗೆ ಹಾಕಿದರೆ, ನಮಗೆ ತಲಾ ₹ 15 ಸಾವಿರ ಬಹುಮಾನ ಬರಲಿದೆ’ ಎಂದಿದ್ದರು. ನಾನು ಗಾಂಜಾ ಸೇವಿಸಿಲ್ಲವೆಂದರೂ ತಪ್ಪೊಪ್ಪಿಕೊಳ್ಳುವಂತೆ ಪೀಡಿಸಿದರು.’

‘ಸುಲಿಗೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು. ಹೀಗಾಗಿಯೇ ಅವರು ಪ್ರಕರಣ ದಾಖಲಿಸುವ ಬೆದರಿಕೆಯೊಡುತ್ತಿದ್ದರು. ನನ್ನನ್ನು ಬಿಡಲು ಏನು ಮಾಡಬೇಕೆಂದು ಕೇಳಿದ್ದೆ. ಆಗ ಅವರು, ಜೇಬಿನಲ್ಲಿದ್ದ ಪರ್ಸ್‌ ತೆಗೆದುಕೊಂಡು ₹ 2,500 ಕಿತ್ತುಕೊಂಡರು. ಎಟಿಎಂ ಘಟಕಕ್ಕೆ ಹೋಗಿ ಪುನಃ ₹ 4 ಸಾವಿರ ತರುವಂತೆ ಹೇಳಿದರು. ಖಾತೆಯಲ್ಲಿ ಹಣವಿಲ್ಲವೆಂದು ಹೇಳಿ ಗೋಗರೆದ ಬಳಿಕವೇ ನನ್ನನ್ನು ಬಿಟ್ಟು ಕಳುಹಿಸಿದರು’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.