ADVERTISEMENT

‘ರೋಡ್‌ ರೋಲರ್’ ಕದ್ದು ಗುಜರಿಗೆ ಮಾರಾಟ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:24 IST
Last Updated 24 ಜೂನ್ 2021, 6:24 IST
ರೋಡ್‌ ರೋಲರ್‌ ಬಿಡಿಭಾಗಗಳನ್ನು ಬೇರ್ಪಡಿಸಿರುವುದು.
ರೋಡ್‌ ರೋಲರ್‌ ಬಿಡಿಭಾಗಗಳನ್ನು ಬೇರ್ಪಡಿಸಿರುವುದು.   

ಬೆಂಗಳೂರು: ಮೈದಾನದಲ್ಲಿ ನಿಲ್ಲಿಸಿದ್ದ ‘ರೋಡ್‌ ರೋಲರ್’ ಕದ್ದು ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಚಂದ್ರಾ ಬಡಾವಣೆಯ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿ ಪವನ್ ಕುಮಾರ್ (22) ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿದ್ದ ವಿನಯ್ ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ತಮಿಳುನಾಡಿನವರಾದ ವಾಹನದ ಮಾಲೀಕ ಲಾಕ್‌ಡೌನ್‌ ಇದ್ದಿದ್ದರಿಂದ ನಾಗರಬಾವಿಯ ಖಾಲಿ ಮೈದಾನದಲ್ಲಿ ವಾಹನ ನಿಲ್ಲಿಸಿ, ಊರಿಗೆ ತೆರಳಿದ್ದರು. ಮತ್ತೆ ಬಂದು ನೋಡಿದಾಗ ವಾಹನ ಆ ಜಾಗದಲ್ಲಿ ಅಲ್ಲಿರಲಿಲ್ಲ. ಮಾಲೀಕ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

‘ಆರೋಪಿ ಪವನ್ ಹಾಗೂ ವಿನಯ್ ವಾಹನ ಕದ್ದೊಯ್ದು, ಮಾಗಡಿ ರಸ್ತೆಯ ಸೀಗೆಹಳ್ಳಿಯ ಗುಜರಿ ವ್ಯಾಪಾರಿ ಇಸ್ಮಾಯಿಲ್‌ಗೆ ಮಾರಿದ್ದರು. ವಾಹನ ಪೂರ್ಣ ಕಬ್ಬಿಣದಲ್ಲೇ ಇದ್ದಿದ್ದರಿಂದ ತೂಕದ ಲೆಕ್ಕದಲ್ಲಿ ಮಾರಾಟ ಮಾಡಿ ಹಣ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಖರೀದಿಸಿದ ನಂತರ ಗುಜರಿಗೆ ಹಾಕಲು ವಾಹನದ ಬಿಡಿಭಾಗಗಳನ್ನು ತೆಗೆದು ತೂಕ ಹಾಕಲಾಗಿತ್ತು. ಸದ್ಯ ವಾಹನವನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.