ADVERTISEMENT

ಅಪರಾಧ ಎಸಗಿ ಜೈಲು: ಜಾಮೀನು ಮೇಲೆ ಹೊರಬಂದು ಮತ್ತೆ ಕಳ್ಳತನ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 15:19 IST
Last Updated 23 ಜುಲೈ 2023, 15:19 IST
ರಫೀಕ್
ರಫೀಕ್   

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದು ಕಳ್ಳತನ ಮಾಡುತ್ತಿದ್ದ ಆರೋಪಿ ರಫೀಕ್ ಅಲಿಯಾಸ್ ಸೇಟುನನ್ನು (29) ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರಿನ ರಫೀಕ್, ಅಪರಾಧ ಹಿನ್ನೆಲೆಯುಳ್ಳವ. ಕೆಲ ಪ್ರಕರಣಗಳಲ್ಲಿ ಈತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಕೆಲದಿನ ಜೈಲಿನಲ್ಲಿದ್ದು ಹೊರಗೆ ಬಂದಿದ್ದ ಈತ, ಪುನಃ ಕಳ್ಳತನ ಮುಂದುವರಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರಕಾಶನಗರದಲ್ಲಿರುವ ದಿನಸಿ ಅಂಗಡಿಯೊಂದರಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ ₹ 22.08 ಲಕ್ಷ ಮೌಲ್ಯದ 409 ಗ್ರಾಂ ಚಿನ್ನಾಭರಣ, 425 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 189 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ರಫೀಕ್, ಕೆ.ಆರ್. ಪುರದಲ್ಲಿ ವಾಸವಿದ್ದ. ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ದುಡಿದ ಹಣ ಖರ್ಚಿಗೆ ಸಾಲದೆ ಕಳ್ಳತನಕ್ಕೆ ಇಳಿದಿದ್ದ. ನಂತರ, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದು ಹೇಳಿವೆ.

ಬೀಗ ಮುರಿದು ಕಳ್ಳತನ: ‘ದೂರುದಾರ ತಮ್ಮ ದಿನಸಿ ಅಂಗಡಿಗೆ ರಾತ್ರಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಅಂಗಡಿಗೆ ಬಂದಾಗ ಕಳ್ಳತನ ಗಮನಕ್ಕೆ ಬಂದಿತ್ತು. ಬೀಗ ಮುರಿದಿದ್ದ ಆರೋಪಿ, ಒಳಗೆ ನುಗ್ಗಿ ₹ 50 ಸಾವಿರ ನಗದು ಕದ್ದು ಪರಾರಿಯಾಗಿದ್ದ’ ಎಂದು ತಿಳಿಸಿವೆ.

‘ಪೀಣ್ಯ, ಗಿರಿನಗರ, ಕಬ್ಬನ್‌ ಪಾರ್ಕ್, ಕೆ.ಆರ್. ಪುರ, ಬನಶಂಕರಿ, ಅಮೃತಹಳ್ಳಿ, ಕಾಡುಗೊಂಡನಹಳ್ಳಿ, ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿದ್ದ. ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ನೆಲಮಂಗಲ, ತಿಪಟೂರು ಠಾಣೆಗಳಲ್ಲೂ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.