ADVERTISEMENT

ಬೈಕ್‌ ಕಳ್ಳತನ: ಛಾಯಾಗ್ರಾಹಕ ಬಂಧನ, ಆರೋಪಿ ಪತ್ತೆಗೆ 200 ಸಿಸಿಟಿವಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:18 IST
Last Updated 24 ಸೆಪ್ಟೆಂಬರ್ 2022, 5:18 IST
ಮಲ್ಲೇಶ್ವರ ಪೊಲೀಸರು ಬಂಧಿತ ಆರೋಪಿಯಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು
ಮಲ್ಲೇಶ್ವರ ಪೊಲೀಸರು ಬಂಧಿತ ಆರೋಪಿಯಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು   

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪದಡಿ ಶ್ರೀಧರ್ ಅಲಿಯಾಸ್ ಚಿಂಗಾರಿ (27) ಎಂಬುವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಮರಳೂರು ದಿನ್ನೆವಾರ್ಡ್‌ನ ನಿವಾಸಿ ಶ್ರೀಧರ್ ಛಾಯಾಗ್ರಾಹಕ ವೃತ್ತಿಯಲ್ಲಿದ್ದ. ಈತನನ್ನು ಬಂಧಿಸಿ ₹ 15 ಲಕ್ಷ ಮೌಲ್ಯದ 30 ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೂಜು ಆಡುತ್ತಿದ್ದ ಆರೋಪಿ ಅದರಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಜೂಜಾಟಕ್ಕೆ ಬೇಕಾದ ಹಣವನ್ನು ಹೊಂದಿಸಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ಬೆಂಗಳೂರು ಹಾಗೂmತುಮಕೂರಿನ ಹಲವು ಕಡೆಗಳಲ್ಲಿ ವಾಹನ ಕಳ್ಳತನ ಮಾಡಿದ್ದ’ ಎಂದರು.

ADVERTISEMENT

‘ಮಲ್ಲೇಶ್ವರದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನವೊಂದು ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆರಂಭದಲ್ಲಿ ಆರೋಪಿ ಸುಳಿವು ಸಿಕ್ಕಿರಲಿಲ್ಲ.’

‘ದ್ವಿಚಕ್ರ ವಾಹನ ಕದ್ದಿದ್ದ ಆರೋಪಿಯು ತುಮಕೂರಿಗೆ ಹೋಗಿದ್ದ ಸುಳಿವು ಲಭ್ಯವಾಗಿತ್ತು. ಬೆಂಗಳೂರು, ನೆಲಮಂಗಲ, ದಾಬಸ್‌ಪೇಟೆ ಹಾಗೂ ತುಮಕೂರಿನ 200 ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಹೇಳಿದರು.

‘ಕದ್ದ ವಾಹನಗಳನ್ನು ಆರೋಪಿ ಮಾರಾಟ ಮಾಡುತ್ತಿದ್ದ. ಹಣವನ್ನು ಜೂಜು ಹಾಗೂ ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ' ಎಂದರು.

‘ಕದ್ದ ವಾಹನದಲ್ಲಿ ಹೊರಟಿದ್ದಾಗಲೇ ಆರೋಪಿಯನ್ನು ಬಂಧಿಸಲಾಯಿತು. ವಾಹನದ ಮೇಲೆ ಚಿಂಗಾರಿ ಎಂಬುದಾಗಿ ಬರೆಸಿಕೊಂಡಿದ್ದ. ಅದನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.