ADVERTISEMENT

ಐದು ತಿಂಗಳ ಶಿಶುವಿನ ಹೆಸರಿನಲ್ಲಿ ಹೈಕೋರ್ಟ್‌ಗೆ ಅರ್ಜಿ

ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿದ್ದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:17 IST
Last Updated 24 ಡಿಸೆಂಬರ್ 2020, 20:17 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸುವಂತೆ ಕೋರಿ ಐದು ತಿಂಗಳ ಶಿಶುವಿನ ಹೆಸರಿನಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿದಾರ ಶಿಶು ಕಿಯಾನ್ ಮೇಧಿ ಕುಮಾರ್ ಪರವಾಗಿ ತಂದೆ ಎಂ.ಆರ್‌.ರಾಕೇಶ್‌ ಪ್ರಬಲ್‌ಕುಮಾರ್ ಪ್ರತಿನಿಧಿಸಿದ್ದಾರೆ. 2020 ಮಾರ್ಚ್ 24 ಮತ್ತು ಮೇ 20ರ ನಡುವೆ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಇರಲಿಲ್ಲ. ಈ ಸಂದರ್ಭದಲ್ಲಿ ಧೂಳಿನ ಕಣ ಮತ್ತು ಮಾನಾಕ್ಸೈಡ್ ಪ್ರಮಾಣ ಉದ್ಯಾನದೊಳಗೆ ಕಡಿಮೆ ಇತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಸಂಚಾರಕ್ಕೆ ಅನುವು ಮಾಡಿದರೆ ಪರಿಸರದ ಮೇಲೆ ಆಗಲಿರುವ ಪರಿಣಾಮದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್ ವಿಭಾಗ ನಡೆಸಿರುವ ಅಧ್ಯಯನವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ‌

ADVERTISEMENT

‘ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಂಚಾರ ಪೊಲೀಸರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಪಾದಚಾರಿಗಳಿಗೆ ಮತ್ತು ವಾಹನಗಳ ಸಂಚಾರಕ್ಕೆ ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಸೆ.8ರಂದು ಅನುಮತಿ ನೀಡಿದ್ದಾರೆ. ಕಬ್ಬನ್ ಉದ್ಯಾನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ತೋಟಗಾರಿಕೆ ಇಲಾಖೆ ಕೈಗೊಳ್ಳಬೇಕೇ ಹೊರತು ಕಂದಾಯ ಇಲಾಖೆಯಲ್ಲ’ ಎಂದು ಅರ್ಜಿದಾರರು ವಾದಿಸಿದ್ದಾರೆ.

‘ಎಸ್‌ಸಿಎಸ್‌ಟಿ ಆಯೋಗ ನ್ಯಾಯಾಂಗದ ಪಾತ್ರ ವಹಿಸಲು ಆಗದು’
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು ನ್ಯಾಯಮಂಡಳಿ ಅಥವಾ ನ್ಯಾಯಾಂಗದ ಪಾತ್ರ ನಿರ್ವಹಿಸುವ ವೇದಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ನೌಕರರ ನಡುವೆ ಈ ವಿವಾದವಿತ್ತು. ಎಂ.ಬಿ.ಸಿದ್ದಲಿಂಗಸ್ವಾಮಿ ಅವರು ಅಧೀಕ್ಷಕರಾಗಿ 2012ರಲ್ಲಿ ಬಡ್ತಿ ಹೊಂದಿದ್ದರು. ಕೆ.ಆರ್‌.ಮುರುಳೀಧರ್ ಅವರು 2015ರಲ್ಲಿ ಬಡ್ತಿ ಹೊಂದಿದ್ದರು.

ಮುರುಳೀಧರ್ ಅವರು ಎಸ್‌ಸಿಎಸ್‌ಟಿ ಆಯೋಗಕ್ಕೆ ಅರ್ಜಿ ಸಲ್ಲಿಸಿ ಸಿದ್ದಲಿಂಗಸ್ವಾಮಿ ಅವರಿಗಿಂತ ಸೇವಾ ಹಿರಿತನ ಇರುವ ಕಾರಣ ಎಲ್ಲಾ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಕೋರಿದ್ದರು. ‘2012 ರಿಂದ ಜಾರಿಗೆ ಬರುವಂತೆ ಸೌಲಭ್ಯಗಳನ್ನು ಒದಗಿಸಬೇಕು’ ಎಂದು 2016ರಲ್ಲಿ ಆಯೋಗ ಆದೇಶ ಹೊರಡಿಸಿತ್ತು.

‘ಮುರುಳೀಧರ್ ಅವರು ರಾಜ್ಯ ಆಡಳಿತ ನ್ಯಾಯಮಂಡಳಿಗೆ(ಕೆಎಟಿ) ಅರ್ಜಿ ಸಲ್ಲಿಸಬೇಕಿತ್ತು’ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕೊಂದುಕೊರತೆಗಳನ್ನು ಪರಿಹರಿಸುವುದು ಆಯೋಗದ ಕರ್ತವ್ಯ’ ಎಂದು ಆಯೋಗದ ಪರ ವಕೀಲರು ಸ್ಪಷ್ಟಪಡಿಸಿದರು. ‘ಆಯೋಗವು ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಕಾರ್ಯಗಳನ್ನು ನಿರ್ವಹಿಸುವ ವೇದಿಕೆಯಾಗಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.