ADVERTISEMENT

ಬೆಂಗಳೂರು: ದ್ವಿಚಕ್ರ ವಾಹನ ಉರುಳಿ ಬಿದ್ದು ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:42 IST
Last Updated 1 ಮೇ 2024, 14:42 IST
   

ಬೆಂಗಳೂರು: ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಸೌರಭ್ (30) ಎಂಬುವವರು ಮೃತಪಟ್ಟಿದ್ದಾರೆ.

‘ಮಣಿಪುರದ ಸೌರಭ್, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲ್ಯಾವೆಲ್ಲೆ ರಸ್ತೆಯಲ್ಲಿರುವ ಕೊಠಡಿಯೊಂದರಲ್ಲಿ ಸ್ನೇಹಿತನ ಜೊತೆ ವಾಸವಿದ್ದರು’ ಎಂದು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಹೇಳಿದರು.

‘ಸೌರಭ್ ಹಾಗೂ ಸ್ನೇಹಿತ, ದ್ವಿಚಕ್ರ ವಾಹನದಲ್ಲಿ ಜಯನಗರದಲ್ಲಿರುವ ಸ್ನೇಹಿತನ ಮನೆಗೆ ಮಂಗಳವಾರ ರಾತ್ರಿ ಹೋಗಿದ್ದರು. ನಸುಕಿನ 4 ಗಂಟೆ ಸುಮಾರಿಗೆ ಇಬ್ಬರೂ ಅಲ್ಲಿಂದ ಹೊರಟಿದ್ದರು.’

ADVERTISEMENT

‘ಸೌರಭ್ ಅವರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಸ್ನೇಹಿತ, ಹಿಂಬದಿಯಲ್ಲಿ ಕುಳಿತಿದ್ದ. ಲ್ಯಾವೆಲ್ಲೆ ರಸ್ತೆಯಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನ ಉರುಳಿಬಿದ್ದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಸೌರಭ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.