
ತೋಟಗಾರಿಕೆ ಇಲಾಖೆಯಿಂದ ನಗರದ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನದಲ್ಲಿ ಏರ್ಪಡಿಸಿದ್ದ ‘ಹೂಗಳ ಹಬ್ಬ’ವನ್ನು ಭಾನುವಾರ ಭಾರಿ ಸಂಖ್ಯೆಯಲ್ಲಿ ಜನರು ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಹೂಗಳ ಹಬ್ಬಕ್ಕೆ ಭಾನುವಾರ ತೆರೆಬಿದ್ದಿದೆ. ಕೊನೇ ದಿನ ಹೂಗಳನ್ನು ಕಣ್ತುಂಬಿಕೊಳ್ಳಲು 1.25 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಹೂಗಳ ಹಬ್ಬವು ಕಬ್ಬನ್ ಉದ್ಯಾನದಲ್ಲಿ ಕಲರವ ಸೃಷ್ಟಿಯಾಗಿತ್ತು. ಸಾಂಸ್ಕೃತಿಕ ಕಲೆಗಳು, ಶಾಸ್ತ್ರೀಯ ನೃತ್ಯ ಪ್ರದರ್ಶನ, ಶಾಸ್ತ್ರೀಯ ಸಂಗೀತ ಕಛೇರಿಗಳು, ಜಾನಪದ ಹಾಡು, ನೃತ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 11 ದಿನಗಳ ಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡಿದ್ದವು.
ಹೂಗಳ ಹಬ್ಬದ ಸಮಾರೋಪ ಸಮಾರಂಭವನ್ನು ಶನಿವಾರವೇ ಮಾಡಲಾಗಿತ್ತು. ಭಾನುವಾರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಜಾ ದಿನ ಆಗಿರುವುದರಿಂದ ಬೆಳಿಗ್ಗೆಯೇ ಮಕ್ಕಳು, ಹಿರಿಯರು ಎನ್ನದೇ ಜನರು ತಂಡ ತಂಡವಾಗಿ ಬರತೊಡಗಿದರು. ಸಂಜೆಯ ಹೊತ್ತಿಗೆ ಕಾಲು ಇಡಲು ಜಾಗ ಇಲ್ಲದಂತಾಗಿತ್ತು.
ಹೂವುಗಳಲ್ಲಿ ಅರಳಿದ ಹಂಪಿಯ ಕಲ್ಲಿನ ರಥ, ಹೂವು, ಹಾಗಲಕಾಯಿ ಹಾಗೂ ಕ್ಯಾಪ್ಸಿಕಮ್‌ನಲ್ಲಿ ರಚಿಸಿದ ಆನೆಯ ಕಲಾಕೃತಿಗಳು, ಹಳದಿ ಮತ್ತು ಕೆಂಪು ಬಣ್ಣದ ಹೂವುಗಳಲ್ಲಿ ಮೂಡಿಬಂದಿರುವ ಕರ್ನಾಟಕದ ನಕ್ಷೆಯ ಮಾದರಿ, ಅಲ್ಲಲ್ಲಿ ಜೋಡಿಸಿ ಇಟ್ಟಿರುವ ಹೂವಿನ ಕುಂಡಗಳನ್ನು ನೋಡಿ ಮಕ್ಕಳು, ಹಿರಿಯರು ಸಂಭ್ರಮಿಸಿದರು.
ಹೂವುಗಳಲ್ಲೇ ಮೂಡಿದ ಜಿಂಕೆ, ಅನಾನಸ್, ಸೇಬು ಹಣ್ಣು, ಸೂರ್ಯಕಾಂತಿ ಹೂವಿನ ದೊಡ್ಡ ಮಾದರಿಗಳ ಮುಂದೆ ನಿಂತು ಫೋಟೊ ತೆಗೆಸಿಕೊಂಡು, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿರುವ ಕಾರಂಜಿಯಲ್ಲಿ ಹೂವಿನ ಡಾಲ್ಫಿನ್, ಟ್ರ್ಯಾಕ್ಟರ್, ಕೋಳಿಗಳ ಮುಂದೆಯೂ ಫೋಟೊ ಕ್ಲಿಕ್ಕಿಸಿಕೊಂಡರು.
‘ಭಾನುವಾರ ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇತ್ತು. ಅದಕ್ಕಾಗಿ ಹೆಚ್ಚುವರಿಯಾಗಿ ಸಂಚಾರಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೆವು. ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಿದ್ದೆವು. ಜನರು ಬರುತ್ತಲೇ ಇದ್ದರು. ಆದರೂ ಟಿಕೆಟ್ ಕೌಂಟರ್‌ಗಳನ್ನು ಸಂಜೆ 6ಕ್ಕೆ ಮುಚ್ಚಬೇಕಾಯಿತು. ಆನಂತರ ಒಳಗಿದ್ದವರು ಹೊರಗೆ ಹೋಗಲು ಸುಮಾರು ಒಂದು ಗಂಟೆ ತೆಗೆದುಕೊಂಡರು’ ಎಂದು ತೋಟಗಾರಿಕೆ ಇಲಾಖೆಯ ಕುಸುಮಾ ಅವರು ಮಾಹಿತಿ ನೀಡಿದರು.
ಲಕ್ಷ ಭಾನುವಾರ ಭೇಟಿ ನೀಡಿದವರು- 1.25
ಲಕ್ಷ ಭಾನುವಾರ ಸಂಗ್ರಹವಾದ ಟಿಕೆಟ್ ಶುಲ್ಕ -₹ 12.50
11 ದಿನಗಳಲ್ಲಿ ಹೂಗಳ ಹಬ್ಬಕ್ಕೆ ಬಂದವರು -6.30 ಲಕ್ಷ
ಒಟ್ಟು ಸಂಗ್ರಹವಾದ ಟಿಕೆಟ್ ಶುಲ್ಕ- ₹ 61 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.