ADVERTISEMENT

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ 90 ನಿಮಿಷಗಳ ಪ್ರವಾಸಿ ನಡಿಗೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 16:14 IST
Last Updated 23 ಜುಲೈ 2025, 16:14 IST
ಕಬ್ಬನ್‌ ಪಾರ್ಕ್‌ನಲ್ಲಿ ಬುಧವಾರ ನಡೆದ ‘ಕಬ್ಬನ್‌ ವಾಕ್ಸ್‌’ ಮಾರ್ಗದರ್ಶಿ ನಡಿಗೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಪರಿಸರ ಕಾರ್ಯಕರ್ತ ಅರುಣ್‌ ಪೈ ಕಬ್ಬನ್ ಉದ್ಯಾನದ ಸಸ್ಯ ಸಂಕುಲ ಕುರಿತು ಮಾಹಿತಿ ನೀಡಿದರು.
ಪ್ರಜಾವಾಣಿ ಚಿತ್ರ
ಕಬ್ಬನ್‌ ಪಾರ್ಕ್‌ನಲ್ಲಿ ಬುಧವಾರ ನಡೆದ ‘ಕಬ್ಬನ್‌ ವಾಕ್ಸ್‌’ ಮಾರ್ಗದರ್ಶಿ ನಡಿಗೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಪರಿಸರ ಕಾರ್ಯಕರ್ತ ಅರುಣ್‌ ಪೈ ಕಬ್ಬನ್ ಉದ್ಯಾನದ ಸಸ್ಯ ಸಂಕುಲ ಕುರಿತು ಮಾಹಿತಿ ನೀಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿರುವ ಸಸ್ಯ ಪ್ರಭೇದಗಳು, ಜೀವವೈವಿಧ್ಯಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ‘ಕಬ್ಬನ್‌ ವಾಕ್ಸ್‌’ ಎಂಬ ಮಾರ್ಗದರ್ಶಿ ನಡಿಗೆ ಪ್ರವಾಸ ಇದೇ 27ರಂದು ಪ್ರಾರಂಭವಾಗಲಿದ್ದು, ಬುಧವಾರ ಮಾಧ್ಯಮ ಪ್ರತಿನಿಧಿಗಳಿಗಾಗಿ ನಡಿಗೆಯನ್ನು ಆಯೋಜಿಸಲಾಗಿತ್ತು.

ಪರಿಸರ ಕಾರ್ಯಕರ್ತ ಅರುಣ್ ಪೈ ನೇತೃತ್ವದ ತಂಡದ ಸದಸ್ಯರು ಕಬ್ಬನ್ ಉದ್ಯಾನದಲ್ಲಿರುವ ಪ್ರಾಣಿ ಸಂಕುಲ, ಸಸ್ಯ ಸಂಕುಲದ ಮಾಹಿತಿ, ಉದ್ಯಾನದ ಇತಿಹಾಸ ಮತ್ತು ಮರಗಳ ಕುರಿತು 90 ನಿಮಿಷ ಮಾಹಿತಿಗಳನ್ನು ಹಂಚಿಕೊಂಡರು. ಪ್ರೆಸ್‌ಕ್ಲಬ್‌ನಿಂದ ಪ್ರಾರಂಭವಾದ ಪ್ರವಾಸಿ ನಡಿಗೆಯಲ್ಲಿ ಕ್ರಿಸ್‌ಮಸ್‌ ಮರ, ಆಲದ ಮರ, ಅರಳಿಗಳ ಇತಿಹಾಸ, ಅದರ ಮಹತ್ವ, ವೈಜ್ಞಾನಿಕ ಹೆಸರನ್ನು ತಿಳಿಸಿದರು. ಒಣಗಿದ ಮರಗಳಲ್ಲಿ ಇರುವೆಗಳು ಯಾವ ರೀತಿಯಾಗಿ ಗೂಡುಗಳನ್ನು ನಿರ್ಮಿಸುತ್ತವೆ ಎಂಬ ಮಾಹಿತಿಯನ್ನು ಹಂಚಿಕೊಂಡರು.

‘ಕಬ್ಬನ್‌ ಉದ್ಯಾನದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಕಬ್ಬನ್‌ ವಾಕ್ಸ್‌ ನಡೆಯಲಿದೆ. ಇದಕ್ಕಾಗಿ 10 ಮಂದಿ ಪರಿಸರ ತಜ್ಞರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ. ಮಾರ್ಗದರ್ಶಕರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. 30 ಜನರನ್ನು ಒಳಗೊಂಡ ಒಂದು ತಂಡಕ್ಕೆ ಒಬ್ಬ ಮಾರ್ಗದರ್ಶಕರನ್ನು ನಿಯೋಜಿಸಲಾಗುವುದು. ವಯಸ್ಕರಿಗೆ ₹200, ಮಕ್ಕಳಿಗೆ ₹50 ದರ ನಿಗದಿಪಡಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಕೊಂಡು ಬರಬೇಕು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಕಬ್ಬನ್‌ ಉದ್ಯಾನ) ಜಿ. ಕುಸುಮಾ ಮಾಹಿತಿ ನೀಡಿದರು.

ADVERTISEMENT

ನೋಂದಣಿ ಹೇಗೆ?

‘ಕಬ್ಬನ್‌ ಉದ್ಯಾನದಲ್ಲಿ ಇದೇ 27ರಂದು ಪ್ರವಾಸಿ ನಡಿಗೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 7.30ಕ್ಕೆ ಕಬ್ಬನ್‌ ವಾಕ್ಸ್‌ ಪ್ರಾರಂಭವಾಗಲಿದೆ. ಕಬ್ಬನ್‌ ಉದ್ಯಾನದ ಬಗ್ಗೆ ಮಾಹಿತಿ ಪಡೆಯಬೇಕೆಂಬ ಆಸಕ್ತಿಯಿರುವವರು www.cubbonpark.in ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು’ ಎಂದು ಜಿ. ಕುಸುಮಾ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.