ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿರುವ ಸಸ್ಯ ಪ್ರಭೇದಗಳು, ಜೀವವೈವಿಧ್ಯಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ‘ಕಬ್ಬನ್ ವಾಕ್ಸ್’ ಎಂಬ ಪ್ರವಾಸಿ ಮಾರ್ಗದರ್ಶಿ ನಡಿಗೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕಬ್ಬನ್ ಉದ್ಯಾನ ಹಾಗೂ ಲಾಲ್‌ಬಾಗ್‌ನಲ್ಲಿ ಸಾವಿರಾರು ಸಸ್ಯ ಪ್ರಭೇದಗಳಿವೆ. ಇವುಗಳ ವೈಜ್ಞಾನಿಕ ಹೆಸರು, ಧಾರ್ಮಿಕ ಮಹತ್ವ, ಔಷಧೀಯ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ತೋಟಗಾರಿಕೆ ಇಲಾಖೆಯು ಕಬ್ಬನ್ ವಾಕ್ಸ್ ಪ್ರಾರಂಭಿಸಿದೆ. ಇಲ್ಲಿ ಪರಿಸರ ಕಾರ್ಯಕರ್ತರು ಆಯಾ ಗಿಡ–ಮರಗಳ ಮಹತ್ವ, ಇತಿಹಾಸ ಹಾಗೂ ಬಳಕೆಯ ಕುರಿತು ಸಂದರ್ಶಕರಿಗೆ ಮಾಹಿತಿ ನೀಡಲಿದ್ದಾರೆ. ಪ್ರತಿಯೊಬ್ಬರೂ ಕಬ್ಬನ್ ಉದ್ಯಾನ ಹಾಗೂ ಲಾಲ್‌ಬಾಗ್‌ನಲ್ಲಿನ ಸಸ್ಯ ಪ್ರಭೇದಗಳು ಹಾಗೂ ಜೀವವೈಧ್ಯಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಕರೆ ನೀಡಿದರು.
ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಮಾತನಾಡಿ, ‘ತೋಟಗಾರಿಕೆ ಇಲಾಖೆ ವತಿಯಿಂದ ಪ್ರವಾಸಿ ನಡಿಗೆಯನ್ನು ಪ್ರಾರಂಭಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸಿ ನಡಿಗೆ ನಡೆಯಲಿದೆ. ಕಬ್ಬನ್ ಉದ್ಯಾನದ ವಿಸ್ತೀರ್ಣ 190 ಎಕರೆಗೂ ಹೆಚ್ಚಿದ್ದು, ಕೇವಲ 90 ನಿಮಿಷಗಳ ಒಂದು ಪ್ರವಾಸಿ ನಡಿಗೆಯಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದನ್ನು 7–8 ವಿಭಾಗಗಳಲ್ಲಿ ವಿಂಗಡಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು.
ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್, ಪರಿಸರ ಕಾರ್ಯಕರ್ತರಾದ ಅರುಣ್ ಪೈ, ಕಾರ್ತಿಕ್, ಪ್ರಿಯಾ ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.