ADVERTISEMENT

ಕ್ಯಾನ್ಸರ್‌ ನಿರೋಧ ಔಷಧಕ್ಕೆ ಬಳಸುವ ‘ಕ್ಯಾಂಪ್ಟೋಥೆಸಿನ್‌’ಗೆ ಕುತೂಹಲಿಗಳ ಕಣ್ಣು

ಕ್ಯಾನ್ಸರ್‌ ನಿರೋಧ ಔಷಧಕ್ಕೆ ಬಳಸುವ ವಸ್ತುವನ್ನು ವೀಕ್ಷಿಸಿದ ಉದ್ಯಮಿಗಳು

ಬಾಲಕೃಷ್ಣ ‍ಪಿ.ಎಚ್‌.
Published 14 ಫೆಬ್ರುವರಿ 2025, 20:23 IST
Last Updated 14 ಫೆಬ್ರುವರಿ 2025, 20:23 IST
‘ಕ್ಯಾಂಪ್ಟೋಥೆಸಿನ್‌’ ಬಗ್ಗೆ ಎಂವೈಕೆ ಬಯೋ ಆ್ಯಕ್ಷೀವ್ಸ್‌ ಇಂಟರ್‌ ನ್ಯಾಷನಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಎಂ. ಕರಿದುರ್ಗನವರ್‌, ನಿರ್ದೇಶಕ ಸಂದೀಪ್‌ ಎಂ. ಕರಿದುರ್ಗನವರ್‌ ಮಾಹಿತಿ ನೀಡಿದರು.
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
‘ಕ್ಯಾಂಪ್ಟೋಥೆಸಿನ್‌’ ಬಗ್ಗೆ ಎಂವೈಕೆ ಬಯೋ ಆ್ಯಕ್ಷೀವ್ಸ್‌ ಇಂಟರ್‌ ನ್ಯಾಷನಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಎಂ. ಕರಿದುರ್ಗನವರ್‌, ನಿರ್ದೇಶಕ ಸಂದೀಪ್‌ ಎಂ. ಕರಿದುರ್ಗನವರ್‌ ಮಾಹಿತಿ ನೀಡಿದರು. ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್   

ಬೆಂಗಳೂರು: ‘ಕ್ಯಾನ್ಸರ್‌ ನಿರೋಧಕ ಔಷಧಕ್ಕೆ ಬಳಸುವ ‘ಕ್ಯಾಂಪ್ಟೋಥೆಸಿನ್‌’ ಪ್ರದರ್ಶನವನ್ನು ಉದ್ಯಮಿಗಳು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಒಂದು ಪ್ಯಾಕೆಟ್‌ ಖರೀದಿಸಲು ಮುಂದಾದರೂ ಇದು ಮಾರಾಟಕ್ಕಿಲ್ಲ. ಔಷಧ ತಯಾರಿಕಾ ಕಂಪನಿಗಳಿಗೆ ಒದಗಿಸುವ ಕಚ್ಚಾ ವಸ್ತು ಎಂದು ಮಳಿಗೆಯವರು ವಿವರ ನೀಡಿ ಕಳುಹಿಸುತ್ತಿದ್ದರು.

ಧಾರವಾಡದ ಎಂವೈಕೆ ಬಯೋ ಆ್ಯಕ್ಷೀವ್ಸ್‌ ಇಂಟರ್‌ ನ್ಯಾಷನಲ್‌ ಕಂಪನಿಯ ಮಳಿಗೆಯೇ ವಿಶಿಷ್ಟ ಆಕರ್ಷಣೆಗೆ ಒಳಗಾದ ಮಳಿಗೆ.

ಮಾಫಿಯ ಫೊಯೆಟಿಡಾ (ಕನ್ನಡದಲ್ಲಿ ದುರ್ವಾಸನೆ ಗಿಡ, ಫುಗ ಕಲ್‌ಗುಜ ಎಂದು ಕರೆಯಲಾಗುತ್ತದೆ) ಗಿಡದಲ್ಲಿ ಇರುವ ಔಷಧೀಯ ಅಂಶವನ್ನು ಬೇರ್ಪಡಿಸಿ, ಸಂಸ್ಕರಿಸಿ ನೀಡುವ ಕೆಲಸವನ್ನು ಈ ಕಂಪನಿ ಮಾಡುತ್ತಿದೆ.

ADVERTISEMENT

‘ಹೈದರಾಬಾದ್‌ನ ಡಾ. ರೆಡ್ಡಿ ಕಂಪನಿ, ಅರಬಿಂದೋ ಫಾರ್ಮಾದವರಿಗೆ ಪೂರೈಕೆ ಮಾಡುತ್ತಿದ್ದೇವೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಾವು ಮಳಿಗೆ ಹಾಕಿದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಅಮೆರಿಕ, ಇಂಗ್ಲೆಂಡ್‌ ಮತ್ತು ಚೀನಾದ ವೈದ್ಯಕೀಯ ಉದ್ಯಮಿಗಳು ಬಂದು ನೋಡಿ ಸಂಭ್ರಮಪಟ್ಟರು. ‘ಕ್ಯಾಂಪ್ಟೋಥೆಸಿನ್‌’ ಸಂಗ್ರಹಿಸುವುದೇ ಸವಾಲಾಗಿದ್ದು, ಪೂರೈಕೆ ಮಾಡುವುದಿದ್ದರೆ ನಮ್ಮನ್ನು ಸಂಪರ್ಕಿಸಿ. ಈ ಬಗ್ಗೆ ಒಪ್ಪಂದ ಮಾಡಿಕೊಳ್ಳೋಣ ಎಂದು ಸಂಪರ್ಕ ಸಂಖ್ಯೆ, ಮೇಲ್‌ ಐಡಿ ನೀಡಿ ಹೋಗಿದ್ದಾರೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಎಂ. ಕರಿದುರ್ಗನವರ್‌ ಮಾಹಿತಿ ನೀಡಿದರು.

‘ಸದ್ಯ ನಾವು ‘ಕ್ಯಾಂಪ್ಟೋಥೆಸಿನ್‌’ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಂದೆ ನಾಲ್ಕೈದು ವರ್ಷಗಳ ನಂತರ ಸರ್ಕಾರದಿಂದ ಅನುಮತಿ ಪಡೆದು ನಾವೇ ಔಷಧ ತಯಾರಿಸಬೇಕು ಎಂಬ ಯೋಜನೆ ಇದೆ’ ಎಂದು ಭವಿಷ್ಯದ ಬಗ್ಗೆ ಕನಸುಗಳನ್ನು ಬಿಚ್ಚಿಟ್ಟರು.

‘ಚೀನಾದಿಂದ ಬಂದ ಗಿಡ ಇದಾಗಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುತ್ತದೆ. ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವ ಇದೆ’ ಎಂದು ಕಂಪನಿಯ ನಿರ್ದೇಶಕ ಸಂದೀಪ್‌ ಎಂ. ಕರಿದುರ್ಗನವರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.