ADVERTISEMENT

ಸೈನಿಕನ ಸೋಗಿನಲ್ಲಿ ₹ 1.45 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 21:23 IST
Last Updated 18 ಜನವರಿ 2020, 21:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೀಠೋಪಕರಣ ಖರೀದಿಸುವುದಾಗಿ ಹೇಳಿ ಸೈನಿಕನ ಸೋಗಿನಲ್ಲಿ ನಗರದ ನಿವಾಸಿ ಸಂದೀಪ್ ದಾಸ್ ಎಂಬುವರಿಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ಕ್ಯೂಆರ್‌ ಕೋಡ್ ಕಳುಹಿಸಿ ₹ 1.45 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ.

ವಂಚನೆ ಸಂಬಂಧ ಸಂದೀಪ್ ದಾಸ್ ಅವರು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ.

‘ಮನೆಯ ಕೆಲ ಪೀಠೋಪಕರಣಗಳನ್ನು ಮಾರಾಟ ಮಾಡಲು ಸಂದೀಪ್ ಅವರು ಒಎಲ್‌ಎಕ್ಸ್‌ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು. ವಿಳಾಸ ಹಾಗೂ ಮೊಬೈಲ್ ನಂಬರ್ ಸಹ ನಮೂದಿಸಿದ್ದರು. ಅದೇ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತ, ಪೀಠೋಪಕರಣ ಖರೀದಿಸುವುದಾಗಿ ಹೇಳಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹಣವನ್ನು ಮುಂಗಡವಾಗಿ ಪಾವತಿಸುವುದಾಗಿ ಹೇಳಿದ್ದ ಆರೋಪಿ, ಸಂದೀಪ್‌ ಅವರ ಮೊಬೈಲ್‌ಗೆ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ಸ್ಕ್ಯಾನ್ ಮಾಡುವಂತೆ ಹೇಳಿದ್ದ. ಸಂದೀಪ್‌ ತಮ್ಮ ಪತ್ನಿಯ ಗೂಗಲ್‌ ಪೇ ವಾಲೆಟ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡಿ ಕೆಲ ಮಾಹಿತಿ ತುಂಬಿದ್ದರು. ಅದಾದ ನಂತರ ಪತ್ನಿಯ ಖಾತೆಯಿಂದ ₹ 1.45 ಲಕ್ಷ ಕಡಿತವಾಗಿದೆ. ಆರೋಪಿಯೇ ಹಣ ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

ಒಎಲ್‌ಎಕ್ಸ್ ₹ 70 ಸಾವಿರ ವಂಚನೆ: ಗ್ರಾಹಕರ ಸೋಗಿನಲ್ಲಿ ಮಹದೇವಪುರ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ವಂಚಕರು, ನಿವಾಸಿಯ ಬ್ಯಾಂಕ್ ಖಾತೆಯಿಂದ₹ 70 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ.

‘ಸೋಫಾ ಸೆಟ್ ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದೆ. ₹9,800 ಸೋಫಾ ಸೆಟ್ ಖರೀದಿಸುವುದಾಗಿ ಹೇಳಿದ್ದ ಆರೋಪಿ, ಮುಂಗಡವಾಗಿ ಹಣ ಪಾವತಿಸುವುದಾಗಿ ಹೇಳಿ ಕ್ಯೂಆರ್ ಕೋಡ್ ಕಳುಹಿಸಿದ್ದ. ಆ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಹಣ ಕಡಿತವಾಯಿತು’ ಎಂಬುದಾಗಿ ನಿವಾಸಿ ದೂರಿನಲ್ಲಿ ಹೇಳಿದ್ದಾರೆ.

ಕೋರಿಯರ್‌ ಪ್ರತಿನಿಧಿ ಸೋಗಿನಲ್ಲಿ ವಂಚನೆ: ಬೆಳ್ಳಂದೂರು ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರ ಖಾತೆಯಿಂದ ₹ 45 ಸಾವಿರ ಡ್ರಾ ಮಾಡಿಕೊಂಡು ವಂಚಿಸಲಾಗಿದೆ.

‘ಡಿಟಿಡಿಸಿ ಕೋರಿಯರ್‌ನಲ್ಲಿ ಬರಬೇಕಿದ್ದ ಪಾರ್ಸೆಲ್ ನಿಗದಿತ ದಿನದಂದು ಬಂದಿರಲಿಲ್ಲ. ಆ ಬಗ್ಗೆ ವಿಚಾರಿಸಲು ಕೆಲ ಜಾಲತಾಣಗಳಲ್ಲಿ ಹುಡುಕಾಡಿ ಕೋರಿಯರ್ ಸಹಾಯವಾಣಿ ನಂಬರ್ ಸಂಗ್ರಹಿಸಿದ್ದೆ. ಅದಕ್ಕೆ ಕರೆ ಮಾಡಿ ವಿಚಾರಿಸಿದ್ದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘ಕೋರಿಯರ್ ಸಂಸ್ಥೆಯ ಪ್ರತಿನಿಧಿಯ ಸೋಗಿನಲ್ಲಿ ಮಾತನಾಡಿದ ಆರೋಪಿ, ಪಾರ್ಸೆಲನ್ನು ತ್ವರಿತವಾಗಿ ತಲುಪಿಸಲು ₹ 9 ಪಾವತಿಸುವಂತೆ ಹೇಳಿದ್ದರು. ಅದನ್ನು ನಂಬಿ ಗೂಗಲ್ ಫಾರ್ಮ್‌ನಲ್ಲಿ ಹೆಸರು, ವಿಳಾಸ ಹಾಗೂ ಬ್ಯಾಂಕ್‌ ಖಾತೆ ವಿವರವನ್ನೆಲ್ಲ ಲಗತ್ತಿಸಿದೆ. ಅದಾದ ನಂತರ ಖಾತೆಯಿಂದ ₹ 45 ಸಾವಿರ ಕಡಿತವಾಗಿದೆ’ ಎಂದು ಮಹಿಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.