ADVERTISEMENT

₹449 ಶೂಗಾಗಿ ₹34,700 ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 20:00 IST
Last Updated 7 ಜನವರಿ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆನ್‌ಲೈನ್ ಶಾಪಿಂಗ್ ಜಾಲತಾಣದಲ್ಲಿ ₹449 ಮೌಲ್ಯದ ಶೂ ಬುಕ್ಕಿಂಗ್ ಮಾಡಿದ್ದ ಯುವಕರೊಬ್ಬರು, ಅದರ ಡೆಲಿವರಿ ಬಗ್ಗೆ ವಿಚಾರಿಸಲೆಂದು ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ ₹34,700 ಕಳೆದುಕೊಂಡಿದ್ದಾರೆ.

‘ವಂಚನೆಗೀಡಾಗಿರುವ 27 ವರ್ಷದ ಯುವಕ ದೂರು ನೀಡಿದ್ದಾರೆ. ಕಂಪನಿಯ ಪ್ರತಿನಿಧಿ ಸೋಗಿನಲ್ಲಿ ಯುವಕನನ್ನು ವಂಚಿಸಲಾಗಿದೆ. ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಬಳಸಿದ್ದ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

‘ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕ, ಕಳೆದ ಡಿ. 21ರಂದು ಶೂ ಬುಕ್ಕಿಂಗ್ ಮಾಡಿದ್ದರು. ಅದಕ್ಕಾಗಿ ಆನ್‌ಲೈನ್‌ನಲ್ಲಿ ₹449 ಪಾವತಿಸಿದ್ದರು. ನಿಗದಿತ ದಿನದಂದು ಶೂ ಬಂದಿರಲಿಲ್ಲ. ಆ ಬಗ್ಗೆ ವಿಚಾರಿಸಲೆಂದು ಆನ್‌ಲೈನ್‌ನಲ್ಲಿದ್ದ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಗೆ ಕರೆ ಮಾಡಿದ್ದರು.’

ADVERTISEMENT

‘ಆರ್ಡರ್ ರದ್ದಾಗಿರುವುದಾಗಿ ಹೇಳಿದ್ದ ಕೇಂದ್ರದ ಪ್ರತಿನಿಧಿ, ₹449 ಬುಕ್ಕಿಂಗ್ ಹಣವನ್ನು ವಾಪಸು ನೀಡುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದರು. ಅದನ್ನು ಯುವಕ ಕ್ಲಿಕ್ ಮಾಡುತ್ತಿದ್ದಂತೆ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕಿಗಳನ್ನು ಪ್ರತಿನಿಧಿ ಕೇಳಿ ತಿಳಿದುಕೊಂಡಿದ್ದರು. ಅದಾದ ಬಳಿಕವೇ ಯುವಕನ ಖಾತೆಯಿಂದ₹34,700 ಕಡಿತವಾಗಿದೆ. ಈ ಬಗ್ಗೆ ಯುವಕ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.